ನವದೆಹಲಿ: ದಕ್ಷಿಣ ರಾಜ್ಯಗಳಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿ ಹೊಸ ವೈದ್ಯಕೀಯ ಸೀಟುಗಳ ಸಂಖ್ಯೆ ಮೇಲೆ ಮಿತಿ ಹೇರುವ ಕುರಿತ ತನ್ನ ನಿರ್ಧಾರವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಬುಧವಾರ ತಡೆಹಿಡಿದಿದೆ. ಹೀಗಾಗಿ, ಕರ್ನಾಟಕ, ತಮಿಳುನಾಡು ಮತ್ತಿತರ ರಾಜ್ಯಗಳಿಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವ ಆಯ್ಕೆ ಲಭಿಸಿದಂತಾಗಿದೆ.
'ಪ್ರತಿ 10 ಲಕ್ಷ ಜನಸಂಖ್ಯೆಗೆ 100 ಎಂಬಿಬಿಎಸ್ ಸೀಟುಗಳು ಇರಬೇಕು ಎಂಬ ತನ್ನ ಈ ಹಿಂದಿನ ನಿರ್ಧಾರವನ್ನು 2025-26ನೇ ಶೈಕ್ಷಣಿಕ ವರ್ಷದಿಂದ ಅನುಷ್ಠಾನಗೊಳಿಸಲಾಗುತ್ತದೆ' ಎಂದು ಆಯೋಗವು ತನ್ನ ಆದೇಶದಲ್ಲಿ ತಿಳಿಸಿದೆ.
ವೈದ್ಯಕೀಯ ಸೀಟುಗಳ ಸಂಖ್ಯೆ ಮೇಲೆ ಮಿತಿ ಹೇರುವ ಆಯೋಗದ ನಿಲುವನ್ನು ಖಂಡಿಸಿ ದಕ್ಷಿಣ ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಆಯೋಗ ತನ್ನ ನಿರ್ಧಾರವನ್ನು ತಡೆಹಿಡಿದಿದೆ ಎಂದು ಮೂಲಗಳು ಹೇಳಿವೆ.
'ವೈದ್ಯಕೀಯ ಸೀಟುಗಳ ಸಂಖ್ಯೆ ಮೇಲೆ ಮಿತಿ ಹೇರುವ ಎನ್‌ಎಂಸಿಯ ಪ್ರಸ್ತಾವನೆಯು ರಾಜ್ಯಗಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬುದಾಗಿ ಆಕ್ರೋಶ ಹೊರಹಾಕಿದ್ದ ದಕ್ಷಿಣದ ರಾಜ್ಯಗಳು, ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಮಾಡಿದ್ದ ಮನವಿ ಮೇರೆಗೆ ಆಯೋಗವು ತನ್ನ ನಿರ್ಧಾರವನ್ನು ತಡೆಹಿಡಿದಿದೆ' ಎಂದು ತಿಳಿಸಿವೆ.
ಆಯೋಗದ ಮಿತಿಯ ಪ್ರಕಾರ, ತಮಿಳುನಾಡು ಮತ್ತು ಕರ್ನಾಟಕ ಕ್ರಮವಾಗಿ 7,600 ಹಾಗೂ 6,700 ವೈದ್ಯಕೀಯ ಸೀಟುಗಳನ್ನು ಹೊಂದಬೇಕಿತ್ತು. ಆದರೆ, ಈ ರಾಜ್ಯಗಳಲ್ಲಿ ಕ್ರಮವಾಗಿ 11,600 ಹಾಗೂ 11,695 ಸೀಟುಗಳು ಇವೆ.
ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂದು ಕರ್ನಾಟಕ ಹಾಗೂ ತಮಿಳುನಾಡು ಯೋಜಿಸಿವೆ. ಆದರೆ, ಆಯೋಗದ ಉದ್ದೇಶಿತ ಪ್ರಸ್ತಾವನೆಯು ಇದಕ್ಕೆ ಅಡ್ಡಿಯಾಗಿತ್ತು.
ಕೆಲವೇ ರಾಜ್ಯಗಳಲ್ಲಿ ವೈದ್ಯಕೀಯ ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾಗುವುದನ್ನು ತಡೆಯುವುದಕ್ಕಾಗಿ ಸೀಟುಗಳ ಸಂಖ್ಯೆ ಮೇಲೆ ಮಿತಿ ಹೇರುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿತ್ತು ಎಂದು ಆಯೋಗದ ಮೂಲಗಳು ಹೇಳಿವೆ.