ನವದೆಹಲಿ: ದೀಪಾವಳಿ ಸೇರಿದಂತೆ ಹಬ್ಬ ಹರಿದಿನಗಳಲ್ಲಿ ಪಟಾಕಿ ಸಿಡಿಸುವುದಕ್ಕೆ ಸಂಬಂಧಿಸಿದಂತೆ ತನ್ನ ಹಿಂದಿನ ಆದೇಶ ಪಾಲಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಪಟಾಕಿ ಮೇಲಿನ ನಿಷೇಧ ತೆರವು ಅಸಾಧ್ಯ:
ನವದೆಹಲಿ: ದೀಪಾವಳಿ ಸೇರಿದಂತೆ ಹಬ್ಬ ಹರಿದಿನಗಳಲ್ಲಿ ಪಟಾಕಿ ಸಿಡಿಸುವುದಕ್ಕೆ ಸಂಬಂಧಿಸಿದಂತೆ ತನ್ನ ಹಿಂದಿನ ಆದೇಶ ಪಾಲಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಪಟಾಕಿ ಮೇಲಿನ ನಿಷೇಧ ತೆರವು ಅಸಾಧ್ಯ:
ದೆಹಲಿ ವಾಯುಮಾಲಿನ್ಯ ವಿಪರೀತವಾಗಿರುವ ಕಾರಣ ಪಟಾಕಿ ಮೇಲಿನ ನಿಷೇಧ ತೆರವುಗೊಳಿಸಲು ಸಾಧ್ಯವಿಲ್ಲ. ಈ ನಿಷೇಧ ಕೇವಲ ದೆಹಲಿಗೆ ಮಾತ್ರ ಸೀಮಿತವಾಗಿಲ್ಲ. ದೇಶದ ಎಲ್ಲಾ ಭಾಗದಲ್ಲೂ ಅನ್ವಯಿಸಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಉದಯಪುರದಲ್ಲಿ ವಾಯು ಮತ್ತು ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜಸ್ಥಾನ ಸರ್ಕಾರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ನ್ಯಾಯಮೂರ್ತಿಗಳಾದ ಎ.ಎಸ್ ಬೋಪಣ್ಣ ಮತ್ತು ಎಂ.ಎಂ ಸುಂದ್ರೇಶ್ ಅವರನ್ನೊಳಗೊಂಡ ವಿಭಾಗೀಯ ಪೀಠ, ರಾಜಸ್ಥಾನದಲ್ಲಿ ಪಟಾಕಿ ಸಿಡಿಸುವುದಕ್ಕೆ ಸಂಬಂಧಿಸಿದಂತೆ ಹಿಂದಿನ ಆದೇಶಗಳ ಅನುಷ್ಠಾನಕ್ಕೆ ನಿರ್ದೇಶನ ಕೋರಿ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಉದಯಪುರದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ತಕ್ಷಣದ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ರಾಜಸ್ಥಾನಕ್ಕೆ ಸೂಚಿಸಿದೆ.
ಮಾಲಿನ್ಯ ನಿರ್ವಹಣೆ ಪ್ರತಿಯೊಬ್ಬರ ಕರ್ತವ್ಯ:
ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಹೋಲಿಸಿದರೆ ವಯಸ್ಕರು ಹೆಚ್ಚು ಪಟಾಕಿ ಸಿಡಿಸುತ್ತಾರೆ. ಪರಿಸರದ ವಿಚಾರದಲ್ಲಿ ನ್ಯಾಯಾಲಯಕ್ಕೆ ಮಾತ್ರ ಹೆಚ್ಚು ಜವಾಬ್ದಾರಿ ಎಂಬ ತಪ್ಪು ಗ್ರಹಿಕೆಯಿದೆ. ಆದರೆ ಮಾಲಿನ್ಯ ನಿರ್ವಹಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ.
ಬೇರಿಯಂ ರಾಸಾಯನಿಕ ಒಳಗೊಂಡಿರುವ ಪಟಾಕಿಗಳ ತಯಾರಿಕೆ, ಮಾರಾಟ ಮತ್ತು ಬಳಕೆಗೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಸೆ.22 ರಂದು ತಿರಸ್ಕರಿಸಿತು. ಪಟಾಕಿಗಳ ಬಳಕೆಗೆ ಯಾವುದೇ ನಿಷೇಧವಿಲ್ಲ. ಆದರೆ ಬೇರಿಯಂ ಹೊಂದಿರುವ ಪಟಾಕಿಗಳನ್ನು ಮಾತ್ರ ನಿಷೇಧಿಸಲಾಗಿದೆ ಎಂದು 2021 ರಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು.