ಉತ್ತರಾಖಂಡ್: ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಯಂತ್ರದ ಕಾರ್ಯಾಚರಣೆಗೆ ಪದೇ ಪದೇ ಅಡ್ಡಿಯುಂಟಾಗುತ್ತಿದೆ. ನಮ್ಮ ಗಮನ ಲಂಬ ರಂಧ್ರ ಕೊರೆಯುವುದರತ್ತ ಕೇಂದ್ರೀಕೃತಗೊಂಡಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.
ರಕ್ಷಣಾ ಕಾರ್ಯಾಚರಣೆ ಪ್ರಗತಿಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಎನ್ ಡಿಎಂಎ ಸದಸ್ಯ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸಯೀದ್ ಅತಾ ಹಸ್ನೈನ್, ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಸಮಯ ತೆಗೆದುಕೊಳ್ಳಲಿದೆ. ಬಹಳ ಕಾಳಜಿ ವಹಿಸಿ ಈ ಕಾರ್ಯಾಚರಣೆ ಮಾಡಬೇಕಾಗಿದೆ.
ಈಗ ಲಂಬ ರಂಧ್ರ ಕೊರೆಯುವಿಕೆಯ ಮೇಲೆ ಗಮ ಕೇಂದ್ರೀಕರಿಸಲಾಗಿದೆ ಮತ್ತು ಸುರಂಗದ ಮೇಲ್ಭಾಗದಲ್ಲಿ ಯಂತ್ರಗಳನ್ನು ಇರಿಸಲಾಗಿರುವುದರಿಂದ "ಮುಂದಿನ 24 ರಿಂದ 36 ಗಂಟೆಗಳಲ್ಲಿ" ಕಾರ್ಯಾಚರಣೆಗಳು ಪ್ರಾರಂಭವಾಗಬಹುದು ಎಂದು ಸದಸ್ಯರು ಹೇಳಿದ್ದಾರೆ. ಸುರಂಗದ ಹೊರಪದರವನ್ನು ತಲುಪಲು ಸುಮಾರು 86 ಮೀಟರ್ ಕೊರೆಯುವ ಅಗತ್ಯವಿದೆ ಮತ್ತು ನಂತರ ಸಿಲುಕಿಬಿದ್ದ ಕಾರ್ಮಿಕರನ್ನು ತಲುಪಲು ಹೊರಪದರವನ್ನು ಒಡೆಯಲಾಗುತ್ತದೆ ಎಂದು ಸಯೀದ್ ಅತಾ ಹಸ್ನೈನ್ ಹೇಳಿದ್ದಾರೆ.
ನವೆಂಬರ್ 12 ರಂದು ಉತ್ತರಾಖಂಡ್‌ನ ಚಾರ್ ಧಾಮ್ ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಒಂದು ಭಾಗ ಭೂಕುಸಿತದ ಪರಿಣಾಮ ಕುಸಿದು, ಕಾರ್ಮಿಕರು ಒಳಗೆ ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯಾಚರಣೆ ಪ್ರಯತ್ನ ಪ್ರಾರಂಭವಾಗಿದೆ.