ಬೆಂಗಳೂರು: ಭಾರತೀಯ ಚಿಂತನ ಹಾಗೂ ಬದುಕುವ ಕ್ರಮಗಳೆರಡೂ ಪರಸ್ಪರ ಪೂರಕ. ಭಾರತ ಶತಮಾನಗಳಿಂದ ವಸಾಹತುಶಾಯಿಗಳ ದಾಸ್ಯದಲ್ಲಿದ್ದರೂ ನಮ್ಮ ಪರಂಪರ, ಸಂಸ್ಕøತಿಗಳು ಬೆಳೆದುಬಂದಿರಲು ಕಾರಣ ಸಂವಾದಿಯಾಗಿ ಬಂದಿರುವ ಜ್ಞಾನ ವರ್ಗದ ಅಹರ್ನಿಶಿಯಾದ ತ್ಯಾಗ ಎಂದು ಲೇಖಕ, ಉಪನ್ಯಾಸಕ, ಕುವೆಂಪು ಭಾಷಾಭಾರತಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ.ಅಜಕ್ಕಳ ಗಿರೀಶ ಭಟ್ ತಿಳಿಸಿದರು.
ರಾಷ್ಟ್ರೋತ್ಥಾನ ಪರಿಷತ್ತಿನ ಸಾಹಿತ್ಯ ವಿಭಾಗ ಕೆಂಪೇಗೌಡ ನಗರದಲ್ಲಿರುವ ‘ಕೇಶವಶಿಲ್ಪ’ ಸಭಾಂಗಣದಲ್ಲಿ ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ‘3ನೆಯ ಕನ್ನಡ ಪುಸ್ತಕ ಹಬ್ಬ’ದ ಅಂಗವಾಗಿ ಶನಿವಾರ ಸಂಜೆ ಸಂಘಟಿಸಿದ ‘ಭಾರತೀಯತೆಯ ಸತ್ತ್ವ’ ಎಂಬ ವಿಷಯದಲ್ಲಿ ವಿಶೇಷೋಪನ್ಯಾಸ ನೀಡಿ ಅವರು ಮಾತನಾಡಿದರು.
ಸ್ವಾತಂತ್ರ್ಯಾನಂತರ ತಡವಾಗಿಯಾದರೂ ನಮ್ಮಲ್ಲಿಂದು ಭಾರತೀಯತೆಯ ಸ್ವತ್ತ್ವದ ಹುಡುಕಾಟ ವಿಸ್ಕøತವಾಗಿ ಆರಂಭವಾಗಿದೆ. ಮೂಲವನ್ನು ಕೆದಕುತ್ತಾ ಹೋದಂತೆ ನಮ್ಮ ವಿಶಾಲ ಸ್ವರೂಪ, ವ್ಯಾಪ್ತಿಗಳು ಕುತೂಹಲ ಮೂಡಿಸಿದೆ. ಅದನ್ನು ಸತ್ತ್ವಪೂರ್ಣವಾಗಿ ಉಳಿಸಬೇಕೆಂಬ ಧೋರಣೆ ಭಾರತೀಯತೆಯ ಹೆಗ್ಗುರುತಾಗಿ ಮೂಡಿಬರುತ್ತಿದೆ ಎಂದರು.
ಭಾರತದ ಪ್ರತಿಯೊಂದು ವಿಚಾರಧಾರೆಗಳೂ ನಾಗರೀಕತೆಯ ಜೊತೆ-ಜೊತೆಗೆ ಬೆಳೆದುಬಂದು ಶ್ರೀಮಂತಗೊಳಿಸಿದ ಪರಂಪರೆಯಾಗಿದೆ. ಇಲ್ಲಿಯ ಸನಾತನ ಧರ್ಮ ವ್ಯವಸ್ಥೆಯೇ ಇಲ್ಲಿಯ ಮೂಲ ಸತ್ತ್ವವಾಗಿದ್ದು, ಎಲ್ಲಾ ಕಾಲಕ್ಕೂ ಪೂರಕವಾದ ಹರವುಗಳಿಂದ ವ್ಯಾಪಿಸಿಕೊಂಡಿರುವಂತದ್ದು. ದಾಳಿಗಳಿಂದ ಸಂರಕ್ಷಿಸಿಕೊಂಡು ಮುನ್ನಡೆದಿದೆ ಎಂದವರು ತಿಳಿಸಿದರು. ಜ್ಞಾನಿಗಳ ಸಮಷ್ಠಿಯ ಅಭಿವ್ಯಕ್ತಿಯಾದ ವೇದ ವ್ಯಕ್ತಿಯ ಅನುಭವ, ನಿಸರ್ಗ, ವಿಜ್ಞಾನ ಶಾಖೆಗಳಾದ ಗಣಿತ, ಖಗೋಳ ಮೊದಲಾದ ಕವಲುಗಳಲ್ಲಿ ಜ್ಞಾನದ ಅನ್ವೇಷಣೆಯಲ್ಲಿ ಸಾಗಿಬಂದು ಸತ್ಯ ಹಾಗೂ ಸತ್ವಾನ್ವೇಷಣೆಯ ನಿರಂತರ ಪ್ರಕ್ರಿಯೆಯಲ್ಲಿ ಮುನ್ನಡೆಯಿತು ಎಂದರು.
ಇಂದು ಪ್ರತಿಯೊಂದನ್ನೂ ವಿಜ್ಞಾನದ ಪರಿಕಲ್ಪನೆಯಲ್ಲಿ ನೋಡುವ ಪ್ರವೃತ್ತಿ ಇದೆ. ಆದರೆ, ಭಾರತೀಯ ಪರಂಪರೆ ವೈಜ್ಞಾನಿಕ ಮತ್ತು ನಂಬಿಕೆಯ ತಳಹದಿಯಲ್ಲಿ ವಿಶ್ಲೇಷಿಸಿ ನೋಡುವ, ಸಾಮಾನ್ಯ ಜನರ ಸ್ವತ್ತ್ವದ ಮೇಲೆ ಸವಾರಿ ಇಲ್ಲದ ಬಹುತ್ವಕ್ಕೆ ಬೆಂಬಲ ನೀಡಿದೆ ಎಂದವರು ತಿಳಿಸಿದರು. ವಿಭಿನ್ನ ಆರಾಧನೆ, ಸಂಸ್ಕøತಿ, ಜೀವನಕ್ರಮ, ಸ್ಥಳೀಯತೆಗಳನ್ನು ಮೇಳೈಸಿ ಭಾರತೀಯತೆಯ ಸ್ವತ್ತ್ವ ಆಧ್ಯಾತ್ಮಿಕ, ವ್ಯಕ್ತಿ ಸ್ವಾತಂತ್ರ್ಯಗಳನ್ನು ತತ್ವವಾಗಿ ಅಳವಡಿಸಿದ ಶ್ರೀಮಂತ ಭೂಮಿಕೆ ಈ ಮಣ್ಣಿನದು ಎಂದವರು ವಿಶ್ಲೇಶಿಸಿದರು. ಅನುಭವ ಮೂಲದ ಭಾರತೀಯತೆ ರಿಲೀಜಿಯನ್ ಕಲ್ಪನೆಯಿಂದ ಹಾನಿಗೊಳಗಾಯಿತು. ಧರ್ಮ ಮತ್ತು ರಿಲೀಜಿಯನ್ ಗಳ ಮಧ್ಯೆ ಭಾರೀ ವ್ಯತ್ಯಾಸಗಳಿದ್ದು, ಪುರಾಣ, ಇತಿಹಾಸಗಳನ್ನು ವೈಚಾರಿಕ ದೃಷ್ಟಿಕೋನದಿಂದ ನೋಡುವ ಅಗತ್ಯ ಏನೆಂಬ ಬಗ್ಗೆ ನಮ್ಮಲ್ಲಿ ಪ್ರಶ್ನಿಸಿಕೊಳ್ಳಬೇಕು. ಭಾರತೀಯ ಸ್ವತ್ತ್ವದ ಸತ್ತ್ವ ಜಗತ್ತಿಗೆ ನೆಮ್ಮದಿ ಕೊಡಬಲ್ಲದೆಂಬುದನ್ನು ನಾವು ಮೊದಲು ಗ್ರಹಿಸಬೇಕು ಎಂದು ಅವರು ಕರೆನೀಡಿದರು.