ಕೊಚ್ಚಿ: ನೌಕಾಪಡೆಯ ಹೆಲಿಕಾಪ್ಟರ್ ಅಪಘಾತದಲ್ಲಿ ನೌಕಾಪಡೆಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ನೌಕಾಪಡೆಯ ಐ.ಎನ್.ಎಸ್. ಏರ್ ಸ್ಟೇಷನ್, ಕೊಚ್ಚಿಯಲ್ಲಿರುವ ದಕ್ಷಿಣ ನೌಕಾಪಡೆಯ ಪ್ರಧಾನ ಕಛೇರಿಯ ಪಕ್ಕದಲ್ಲಿದೆ. ಶನಿವಾರ ಮಧ್ಯಾಹ್ನ 2 ಗಂಟೆಗೆ ರನ್‍ವೇಯಲ್ಲಿ ಅಪಘಾತ ಸಂಭವಿಸಿದೆ.
ರನ್‍ವೇಯಲ್ಲಿದ್ದ ನೌಕಾಪಡೆಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಹೆಲಿಕಾಪ್ಟರ್‍ನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಇಬ್ಬರನ್ನೂ ನೌಕಾಪಡೆಯ ಸಂಜೀವನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯ ಗಂಭೀರವಾಗಿಲ್ಲ ಎಂದು ವರದಿಯಾಗಿದೆ. ಕೊಚ್ಚಿ ಪೋರ್ಟ್ ಪೋಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ನೌಕಾಪಡೆಯ ಅತ್ಯಂತ ಹಳೆಯ ಹೆಲಿಕಾಪ್ಟರ್ 'ಚೇತಕ್' ಅಪಘಾತಕ್ಕೀಡಾಗಿದೆ. ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ. ಅಪಘಾತದ ಬಗ್ಗೆ ನೌಕಾಪಡೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಅಪಘಾತದ ಬಗ್ಗೆ ನೌಕಾಪಡೆ ಶೀಘ್ರದಲ್ಲೇ ಸ್ಪಂದಿಸುವ ನಿರೀಕ್ಷೆಯಿದೆ.