: ಭೌತಿಕ ಸಿಮ್ ಬದಲು ಇಸಿಮ್ ಹೆಚ್ಚು ಬಳಕೆಗೆ ಬರುತ್ತಿದ್ದಂತೆ ಐಸಿಮ್ ತಂತ್ರಜ್ಞಾನ ಈಗ ಸದ್ದು ಮಾಡುತ್ತಿದೆ.
ಸ್ಮಾರ್ಟ್‌ಫೋನ್‌ಗಳಿಗೆ ಮದರ್‌ಬೋರ್ಡ್ ಸಿದ್ಧಪಡಿಸುವ ಕ್ವಾಲ್ಕಮ್ ಕಂಪನಿಯು ಇತ್ತೀಚೆಗೆ ಐಸಿಮ್ ಆಧಾರಿತ ಸ್ಮಾರ್ಟ್‌ಫೋನ್ ಚಿಪ್ ಅನ್ನು ಭವಿಷ್ಯದಲ್ಲಿ ಪರಿಚಯಿಸುವುದಾಗಿ ಹೇಳಿರುವುದು ಈಗ ಚರ್ಚೆಯಾಗುತ್ತಿದೆ.
ಇದು ಜಾರಿಗೆ ಬಂದಿದ್ದೇ ಆದಲ್ಲಿ, ಮುಂಬರುವ ಸ್ಮಾರ್ಟ್‌ಫೋನ್‌ಗಳಲ್ಲಿ ಸಿಮ್‌ಗಾಗಿ ಪ್ರತ್ಯೇಕ ಕೋಣೆ ಇರದು. ಹಾಗಿದ್ದರೆ ಸದ್ಯ ಇರುವ ಇಸಿಮ್‌ಗೂ ಮತ್ತು ಐಸಿಮ್‌ಗೂ ಇರುವ ವ್ಯತ್ಯಾಸವೇನು?
ಫೋನ್ ಹಾರ್ಡ್‌ವೇರ್ ಒಳಗೆ ಇಸಿಮ್ ಅನ್ನು ನೇರವಾಗಿ ಎಂಬೆಡ್ ಮಾಡಲಾಗುವುದರಿಂದ ಅದು ಪ್ರತ್ಯೇಕ ಚಿಪ್‌ನಲ್ಲಿರುತ್ತದೆ. ಒಂದು ಅರ್ಥದಲ್ಲಿ ಇದು ಭೌತಿಕ ಸಿಮ್ ಕಾರ್ಡ್‌ನಂತೆಯೇ ಇರುತ್ತದೆ ಆದರೆ ಅದಕ್ಕಾಗಿಯೇ ಈಗಿರುವ ಫೋನ್‌ನಂತೆ ಒಳಗೆ ಪ್ರತ್ಯೇಕ ಜಾಗ ನಿಗದಿಯಾಗಿರುವುದಿಲ್ಲ. ಇದರಿಂದಾಗಿ ಫೋನ್ ಅನ್ನು ಇನ್ನಷ್ಟು ತೆಳುವಾಗಿ ಹಾಗೂ ಫೋನ್ ತೂಕವನ್ನು ಇನ್ನಷ್ಟು ತಗ್ಗಿಸಲು ಸಾಧ್ಯ.
ಇಸಿಮ್ ಪಡೆಯುವುದು ಒಂದು ನೆಟ್‌ವರ್ಕ್‌ನಿಂದ ಮತ್ತೊಂದು ನೆಟ್‌ವರ್ಕ್‌ಗೆ ಭಿನ್ನವಾದರೂ, ಇದನ್ನು ಪಡೆಯಲು ಆಪರೇಟರ್ ಬಳಿಯೇ ಹೋಗಬೇಕೆಂದೇನೂ ಇಲ್ಲ. ಆಪರೇಟರ್‌ಗಳ ಆಯಪ್ ಬಳಸಿಯೂ ಇಸಿಮ್ ಸೌಲಭ್ಯಕ್ಕೆ ಅಪ್‌ಗ್ರೇಡ್ ಆಗಬಹುದು.
ಇಸಿಮ್ ಸೌಲಭ್ಯವು ಸದ್ಯ ಐಫೋನ್‌ನ ಎಕ್ಸ್‌ಆರ್, ಎಕ್ಸ್‌ಎಸ್, ಎಕ್ಸ್‌ಎಸ್ ಮ್ಯಾಕ್ಸ್, ಐಫೋನ್ 11, ಎಸ್‌ಇ, 12, 13, 14 ಹಾಗೂ 15 ಮಾದರಿಯ ಎಲ್ಲಾ ಫೋನ್‌ಗಳಲ್ಲೂ ಲಭ್ಯ.
ಇಸಿಮ್‌ಗೆ ಅವಕಾಶವಿರುವ ಆಯಂಡ್ರಾಯ್ಡ್ ಆಪರೇಟಿಂಗ್ ಸಿಂಸ್ಟಮ್ ಹೊಂದಿರುವ ಫೋನುಗಳ ಸಂಖ್ಯೆ ಕಡಿಮೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಝಡ್ ಫ್ಲಿಪ್, ಗ್ಯಾಲಕ್ಸಿ ಫೋಲ್ಡ್, ನೋಟ್ 20 ಅಲ್ಟ್ರಾ, ನೋಟ್ 20, ಝಡ್ ಫೋಲ್ಡ್ 2, ಎಸ್21 ಸಿರೀಸ್, ಎಸ್20, ಝಡ್ ಫೋಲ್ಡ್ 3, ಝಡ್ ಫ್ಲಿಪ್ 3, ಎಸ್22, ಎಸ್23, ಗ್ಯಾಲಾಕ್ಸಿ ಝಡ್ ಫೋಲ್ಡ್ 4, ಫ್ಲಿಪ್ 4 ಫೋನುಗಳಲ್ಲಿವೆ.
ಜತೆಗೆ ಮೊಟೊರೊಲಾ ರೇಝರ್, ನೆಕ್ಸ್ಟ್ ರೇಝರ್, ಎಡ್ಜ್ 40, 40 ಸಿರೀಸ್, ನೋಕಿಯಾ ಜಿ60, ವಿವೊ ಎಕ್ಸ್90 ಪ್ರೊ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸೌಲಭ್ಯ ಲಭ್ಯ. ಆದರೆ ಫೋನ್ ಅನ್ನು ಅಪ್‌ಗ್ರೇಡ್ ಮಾಡಿರಬೇಕು.
ಸದ್ಯ ಇಸಿಮ್ ಲಭ್ಯವಿರುವ ಫೋನ್‌ಗಳಲ್ಲಿ ಭೌತಿಕ ಸಿಮ್ ಕಾರ್ಡ್ ಕೂಡಾ ಇದೆ. ವಿದೇಶಗಳಿಗೆ ಪ್ರಯಾಣಿಸುವವರು ಅಲ್ಲಿನ ಸಿಮ್ ಬಳಸುವುದಾದರೆ ಇಸಿಮ್ ಜತೆ, ಭೌತಿಕ್ ಸಿಮ್ ಬಳಸಲು ಸಾಧ್ಯ. ಜತೆಗೆ ಇಸಿಮ್ ಭದ್ರತೆಯ ದೃಷ್ಟಿಯಿಂದಲೂ ಹೆಚ್ಚು ಸದೃಢ. ಆದರೆ ಫೋನ್ ಬದಲಿಸಿದರೆ ಇಸಿಮ್ ಆಯಕ್ಟಿವೇಷನ್ ತುಸು ಹೆಚ್ಚು ಶ್ರಮ ಬೇಡುತ್ತದೆ.
ಹಾಗಿದ್ದರೆ ಐಸಿಮ್ ಬಳಕೆ ಹೇಗೆ?
ಐಸಿಮ್ ಕೂಡಾ ಇಸಿಮ್‌ನಂತೆಯೇ... ಆದರೆ ಇದು ಚಿಪ್‌ಸೆಟ್ ಒಳಗೇ ಸೇರಿಸಲಾಗಿರುತ್ತದೆ. ಹೀಗಾಗಿ ಇದಕ್ಕಾಗಿಯೇ ಮತ್ತೊಂದು ಚಿಪ್ ಅನ್ನು ಅಳವಡಿಸುವ ಅಗತ್ಯವಿಲ್ಲ. ಕ್ವಾಲ್ಕಮ್ ಕಂಪನಿಯ ಪ್ರಕಾರ ಐಸಿಮ್ ನ್ಯಾನೊ ಸಿಮ್‌ಕಾರ್ಡ್‌ಗಿಂತ ನೂರು ಪಟ್ಟು ಸಣ್ಣದಂತೆ.
ಐಸಿಮ್ ಬಳಕೆಯಿಂದ ಬ್ಯಾಟರಿ ಬಳಕೆ ಪ್ರಮಾಣ ತಗ್ಗಲಿದೆ. ಇದರಿಂದ ಬ್ಯಾಟರಿ ಬಾಳಿಕೆ ಹೆಚ್ಚಲಿದೆ ಎಂದೆನ್ನಲಾಗುತ್ತಿದೆ. ಜತೆಗೆ ಧೂಳು ಮತ್ತು ನೀರಿನಿಂದ ಫೋನ್ ಅನ್ನು ರಕ್ಷಿಸಬಹುದಾಗಿದೆ. ಇದರಿಂದ ಸ್ಮಾರ್ಟ್‌ಫೋನ್‌ಗಳ ಬಾಳಿಕೆ ಹೆಚ್ಚಲಿದೆ. ಉಳಿದಂತೆ ಇಸಿಮ್‌ನಂತೆಯೇ ಇದು ಕಾರ್ಯ ನಿರ್ವಹಿಸಲಿದೆ. ಇಸಿಮ್ ಹಾಗೂ ಐಸಿಮ್ ಬಳಕೆಯಿಂದ ಇನ್ನಷ್ಟು ಬೇರೆ ಸೌಲಭ್ಯದ ಉಪಕರಣ ಸೇರಿಸಲು ಮೊಬೈಲ್ ತಯಾರಿಕಾ ಕಂಪನಿಗಳಿಗೆ ಸಾಧ್ಯವಾಗಲಿದೆ ಎನ್ನುವುದು ತಂತ್ರಜ್ಞರ ಲೆಕ್ಕಾಚಾರ.
ನೆಟ್‌ವರ್ಕ್ ಕಂಪನಿ ಬದಲಿಸಿದರೆ ಅದರ ಸಿಮ್ ಖರೀದಿಯ ಗೋಜು ಗ್ರಾಹಕರಿಗೆ ಇರದು. ಸಿಮ್ ತಯಾರಿಕೆ ಹಾಗೂ ಪೂರೈಕೆಯ ಸಮಸ್ಯೆಯೂ ತಗ್ಗಲಿದೆ. ಹೀಗಾಗಿ ಇಸಿಮ್ ಅಥವಾ ಐಸಿಮ್ ಬಳಕೆ ಭವಿಷ್ಯದ ತಂತ್ರಜ್ಞಾನ ಎಂದೇ ವಿಶ್ಲೇಷಿಸಲಾಗುತ್ತಿದೆ. 2030ರ ಹೊತ್ತಿಗೆ ಐಸಿಮ್ ಬಳಕೆಗೆ ಸಿಗುವ ಸಾಧ್ಯತೆ ಇದೆ ಎಂದು ತಂತ್ರಜ್ಞರು ಹೇಳಿದ್ದಾರೆ.