ಹಾಂಗ್‌ಕಾಂಗ್: 'ದೇಶದಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿದೆ. ಜನನ ಪ್ರಮಾಣ ಕುಸಿಯುತ್ತಿದೆ. ಈ ಹಂತದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಕಠಿಣವಾಗಿದ್ದು, ಕುಟುಂಬದ ಹೊಸ ಪರಿಕಲ್ಪನೆಯನ್ನು ಅವರು ಹುಟ್ಟುಹಾಕಬೇಕಿದೆ' ಎಂದು ಚೀನಾದ ಅಧ್ಯಕ್ಷ ಷಿ ಜಿಂಗ್‌ಪಿಂಗ್ ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯ ಮಾಧ್ಯಮ ಸಂಸ್ಥೆಯೊಂದಿಗೆ ಮಾತನಾಡಿದ ಷಿ, ಕಮ್ಯುನಿಸ್ಟ್ ಪಕ್ಷದಲ್ಲಿ ಕೆಲಸ ಮಾಡುತ್ತಿರುವ ಅಖಿಲ ಚೀನಾ ಮಹಿಳಾ ಒಕ್ಕೂಟವು ಹೊಸ ನಾಯಕತ್ವದತ್ತ ಕೆಲಸ ಮಾಡಲಿದೆ. ಮಹಿಳೆ ತನ್ನ ಬೆಳವಣಿಗೆಗೆ ಸಂಬಂಧಿಸಿದಂತೆ ಮಾಡಿದ ಕೆಲಸಗಳನ್ನು ಹೊರತುಪಡಿಸಿ, ಕುಟುಂಬ ಹಾಗೂ ಸಾಮಾಜಿಕ ಸೌಹಾರ್ದತೆ, ರಾಷ್ಟ್ರೀಯ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಸಂಬಂಧಿಸಿದ್ದಾಗಿದೆ' ಎಂದಿದ್ದಾರೆ.
' ಈ ಹಂತದಲ್ಲಿ ವಿವಾಹ ಮತ್ತು ಮಕ್ಕಳನ್ನು ಹೊಂದುವುದು ಹಾಗೂ ಯುವ ಸಮುದಾಯದಲ್ಲಿ ಮದುವೆ, ಮಕ್ಕಳು ಹಾಗೂ ಕುಟುಂಬ ಕುರಿತ ಕಲ್ಪನೆಯಲ್ಲಿ ಮಾರ್ಗದರ್ಶನ ಮಾಡುವ ಹೊಸ ಸಂಸ್ಕೃತಿಯನ್ನು ಹುಟ್ಟುಹಾಕಬೇಕಿದೆ' ಎಂದಿದ್ದಾರೆ.
ಮಕ್ಕಳ ಪಾಲನೆಗೆ ತಗಲುವ ಖರ್ಚು, ಅವರ ಭವಿಷ್ಯ ಕಟ್ಟುಕೊಡುವಲ್ಲಿನ ಸಮಸ್ಯೆ, ಲಿಂಗ ತಾರತಮ್ಯ ಹಾಗೂ ಮದುವೆ ಆಗಲು ಇಷ್ಟ ಇಲ್ಲದಿರುವ ಸಮಸ್ಯೆಯಿಂದಾಗಿ ಬಹಳಷ್ಟು ಮಹಿಳೆಯರು ಮಕ್ಕಳನ್ನು ಹೊಂದಲು ಹಿಂದೇಟು ಹಾಕುತ್ತಿದ್ದಾರೆ. ಇದರ ಜತೆಯಲ್ಲಿ ಮಹಿಳೆಯೊಬ್ಬಳು ಮದುವೆಯಾಗದೆ ಮಕ್ಕಳನ್ನು ಪಡೆಯುವಂತಿಲ್ಲ ಎಂಬ ಕಠಿಣ ಕಾನೂನು ಕೂಡಾ ಇದಕ್ಕೆ ಪೂರಕವಾಗಿದೆ ಎಂದೆನ್ನಲಾಗಿದೆ.
ಚೀನಾದ ಸಾಂಖಿಕ ಇಲಾಖೆಯು ಜನವರಿಯಲ್ಲಿ ಬಿಡುಗಡೆ ಮಾಡಿದ ವರದಿ ಅನ್ವಯ ಕಳೆದ ಆರು ದಶಕಗಳ ಅಂಕಿಅಂಶಗಳಿಗೆ ಹೋಲಿಸಿದಲ್ಲಿ ಇದೇ ಮೊದಲ ಬಾರಿಗೆ ಚೀನಾದ ಜನಸಂಖ್ಯೆ ವೃದ್ಧಿ ಕುಸಿದಿದೆ. ಜತೆಗೆ ವಯಸ್ಸಾದವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ಎರಡು ವರ್ಷಗಳಿಂದ ಮಕ್ಕಳ ಪಾಲನೆಗೆ ಸಂಬಂಧಿಸಿದಂತೆ ಹಲವು ಆರ್ಥಿಕ ನೆರವು ಮತ್ತು ಸೌಲಭ್ಯಗಳನ್ನು ಘೋಷಿಸುವ ಮೂಲಕ ಜನನ ಪ್ರಮಾಣವನ್ನು ಹೆಚ್ಚಿಸುವ ಯೋಜನೆಗಳನ್ನು ಇಲಾಖೆಗಳು ಕೈಗೊಂಡಿವೆ ಎಂದು ವರದಿಯಾಗಿದೆ.