ನವದೆಹಲಿ: ಪಾಕಿಸ್ತಾನದ ಕಲಾವಿದರು ಭಾರತದಲ್ಲಿ ತಮ್ಮ ಕಲಾ ಪ್ರದರ್ಶನ ನೀಡಲು ಅಥವಾ ಕೆಲಸ ಮಾಡಲು ಸಂಪೂರ್ಣವಾಗಿ ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಇಷ್ಟು ಸಂಕುಚಿತ ಮನೋಭಾವ ಬೇಡ ಎಂದು ಅರ್ಜಿದಾರರಿಗೆ ಬುದ್ಧಿವಾದ ಹೇಳಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠವು ಬಾಂಬೆ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿ ಸಿನಿ ಕೆಲಸಗಾರ ಮತ್ತು ಕಲಾವಿದ ಫೈಜ್ ಅನ್ವರ್ ಖುರೇಷಿ ಸಲ್ಲಿಸಿದ ಮನವಿಯನ್ನು ರದ್ದುಗೊಳಿಸಿತು. ಇಂತಹ ಮನವಿ ಸಲ್ಲಿಸಬಾರದು, ಇಷ್ಟೊಂದು ಸಂಕುಚಿತ ಮನೋಭಾವ ಬೇಡ ಎಂದು ಹೇಳಿದರು.
ಈ ಹಿಂದೆ ಬಾಂಬೆ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ್ದು, ಪಾಕಿಸ್ತಾನ ಕಲಾವಿದರಿಗೆ ನಿಷೇಧ ಹೇರಿದರೆ ಸಾಂಸ್ಕೃತಿಕ ಸಾಮರಸ್ಯ, ಏಕತೆ ಮತ್ತು ಶಾಂತಿಯನ್ನು ಉತ್ತೇಜಿಸುವಲ್ಲಿ ಹಿನ್ನಡೆಯ ಹೆಜ್ಜೆಯಾಗಿದೆ ಮತ್ತು ಅದರಲ್ಲಿ ಯಾವುದೇ ಅರ್ಹತೆ ಇಲ್ಲ ಎಂದು ಹೇಳಿದೆ.
ದೇಶಭಕ್ತರಾಗಲು, ವಿದೇಶದವರೊಂದಿಗೆ ಅಥವಾ ನೆರೆಹೊರೆಯ ದೇಶಗಳೊಂದಿಗೆ ದ್ವೇಷ ಸಾಧಿಸುವ ಅಗತ್ಯವಿಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ನಿಜವಾದ ದೇಶಪ್ರೇಮಿ ಎಂದರೆ ನಿಸ್ವಾರ್ಥ, ದೇಶಕ್ಕಾಗಿ ಮುಡಿಪಾಗಿರುವ ವ್ಯಕ್ತಿ, ಅವನು ಒಳ್ಳೆಯ ಹೃದಯದ ವ್ಯಕ್ತಿಯಾಗದ ಹೊರತು ಅದು ಇರಲಾರದು. ಹೃದಯವಂತ ವ್ಯಕ್ತಿಯು ತನ್ನ ದೇಶದಲ್ಲಿ ಯಾವುದೇ ಚಟುವಟಿಕೆಯನ್ನು ಸ್ವಾಗತಿಸುತ್ತಾನೆ. ಇದು ದೇಶದೊಳಗೆ ಮತ್ತು ಗಡಿಯುದ್ದಕ್ಕೂ ಶಾಂತಿ, ಸೌಹಾರ್ದತೆ ಮತ್ತು ಶಾಂತಿಯನ್ನು ಉತ್ತೇಜಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕಲೆ, ಸಂಗೀತ, ಕ್ರೀಡೆ, ಸಂಸ್ಕೃತಿ, ನೃತ್ಯ ಹೀಗೆ ರಾಷ್ಟ್ರೀಯತೆಗಳು, ಸಂಸ್ಕೃತಿಗಳು ಮತ್ತು ರಾಷ್ಟ್ರಗಳನ್ನು ಮೀರಿದ ಚಟುವಟಿಕೆಗಳು ರಾಷ್ಟ್ರ ಮತ್ತು ರಾಷ್ಟ್ರಗಳ ನಡುವೆ ನಿಜವಾಗಿಯೂ ಶಾಂತಿ, ನೆಮ್ಮದಿ, ಏಕತೆ ಮತ್ತು ಸೌಹಾರ್ದತೆಯನ್ನು ತರುತ್ತವೆ ಎಂದು ಬಾಂಬೆ ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು.
ಕ್ರಿಕೆಟ್ ವರ್ಲ್ಡ್ ಕಪ್ ನಲ್ಲಿ ಪಾಕಿಸ್ತಾನ ಕೂಡ ಭಾಗಿಯಾಗಿತ್ತಲ್ಲವೇ ಎಂದು ನ್ಯಾಯಾಲಯ ಹೇಳಿತು. ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವ ಭಾರತದ ಸಂವಿಧಾನದ 51 ನೇ ವಿಧಿಗೆ ಅನುಗುಣವಾಗಿ ಒಟ್ಟಾರೆ ಶಾಂತಿ ಮತ್ತು ಸೌಹಾರ್ದತೆಯ ಹಿತಾಸಕ್ತಿಯಲ್ಲಿ ಭಾರತ ಸರ್ಕಾರ ಕೈಗೊಂಡ ಪ್ರಶಂಸನೀಯ ಸಕಾರಾತ್ಮಕ ಕ್ರಮಗಳಿಂದ ಆಗಿದೆ ಬಾಂಬೆ ಹೈಕೋರ್ಟ್ ಹೇಳಿತ್ತು.