ನವದೆಹಲಿ: ಮಾನ್ಯತೆ ಪಡೆದ ಮಂಡಳಿಗಳಿಂದ ದ್ವಿತೀಯ ಪಿಯು ಅಥವಾ 12ನೇ ತರಗತಿ ಉತ್ತೀರ್ಣರಾದ ಬಳಿಕ ಹೆಚ್ಚುವರಿ ವಿಷಯವಾಗಿ ಇಂಗ್ಲಿಷ್ ಜತೆಗೆ ಭೌತವಿಜ್ಞಾನ, ರಸಾಯನ ವಿಜ್ಞಾನ, ಜೀವವಿಜ್ಞಾನ ಅಥವಾ ಜೈವಿಕ ತಂತ್ರಜ್ಞಾನ ವಿಷಯಗಳನ್ನು ಅಧ್ಯಯನ ಮಾಡಿ ಪಾಸಾಗಿರುವ ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶ ಪರೀಕ್ಷೆಯಾದ 'ನೀಟ್- ಯುಜಿ' ಬರೆಯಲು ಅರ್ಹತೆ ಪಡೆದಿದ್ದಾರೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಈ ನಿಟ್ಟಿನಲ್ಲಿ ತೀರ್ಮಾನ ತೆಗೆದುಕೊಂಡಿದ್ದು, ಬುಧವಾರ ಪ್ರಕಟಣೆ ಹೊರಡಿಸಿದೆ. ಈ ಹಿಂದೆ ಅರ್ಜಿ ತಿರಸ್ಕೃತಗೊಂಡಿದ್ದ ವಿದ್ಯಾರ್ಥಿಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಮೊದಲು ಎಂಬಿಬಿಎಸ್ ಪ್ರವೇಶಕ್ಕೆ ನಿಗದಿಯಾಗಿದ್ದ ನಿಯಮಾವಳಿಗಳಲ್ಲಿ ಇದಕ್ಕೆ ಅವಕಾಶ ಇರಲಿಲ್ಲ. ಇದರಿಂದ ವೈದ್ಯಕೀಯ ಕೋರ್ಸ್ ಓದುವ ಆಸಕ್ತಿ ಇರುವ ಹಲವು ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಅಲ್ಲದೆ ವಿದೇಶಗಳಲ್ಲಿ ವೈದ್ಯಕೀಯ ಕೋರ್ಸ್ ಅಧ್ಯಯನ ನಡೆಸುವುದಕ್ಕೂ ತೊಂದರೆ ಆಗುತ್ತಿತ್ತು. ಇದರಿಂದ ಹಲವು ವಿದ್ಯಾರ್ಥಿಗಳು ಕೋರ್ಟ್ ಮೆಟ್ಟಿಲು ಹತ್ತಿದ್ದರು.
ಇದೆಲ್ಲವನ್ನೂ ಗಣನೆಗೆ ತೆಗೆದುಕೊಂಡಿರುವ ಎನ್‌ಎಂಸಿ, ಹೊಸ ಶಿಕ್ಷಣ ನೀತಿಗೆ ಪೂರಕವಾಗಿ ನಿಯಮಾವಳಿಯಲ್ಲಿ ಅವಕಾಶ ಮಾಡಿಕೊಟ್ಟಿದೆ.