ಕಾಸರಗೋಡು: ತುಳುನಾಡು ಮತ್ತು ಉತ್ತರ ಕೇರಳದ ಕರಾವಳಿ ಪ್ರದೇಶ ಜನಪದ ದೈವಾರಾಧನೆಗಳ ಸಮೃದ್ಧ ನೆಲವಾಗಿದ್ದು, ಮಾನವಶಾಸ್ತ್ರದ ಹಿನ್ನೆಲೆಯ ಅಧ್ಯಯನಗಳಿಗೆ ಕಾಸರಗೋಡುಪ್ರದೇಶದಲ್ಲಿ ಅನಂತ ಸಾಧ್ಯತೆಗಳಿವೆ ಎಂಬುದಾಗಿ ರಷ್ಯನ್ ಮಾನವಶಾಸ್ತ್ರ ವಿದ್ವಾಂಸೆ ಡಾ.ಸ್ವೆಟ್ಲಾನ ರೈಝಕೋವ ತಿಳಿಸಿದ್ದಾರೆ.
ಅವರು ಕಾಸರಗೋಡು ಸರ್ಕಾರಿ ಕಾಲೇಜಿನ ಸಭಾಂಗಣದಲ್ಲಿ ಕನ್ನಡಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಆಶ್ರಯದಲ್ಲಿ `ಕಾಸರಗೋಡಿನ ಸಾಂಸ್ಕøತಿಕ ವೈವಿಧ್ಯ'ಎಂಬ ವಿಷಯದಲ್ಲಿ ನಡೆಯುತ್ತಿರುವ ಮೂರು ದಿವಸಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ `ಕಾಸರಗೋಡಿನ ಜನಪದ ಸಂಸ್ಕøತಿ'ವಿಷಯದಲ್ಲಿಪ್ರಬಂಧವನ್ನು ಮಂಡಿಸಿ ಮಾತನಾಡಿದರು.
ಕಾಸರಗೋಡು, ತುಳುವಿನ ಭೂತಾರಾಧನೆ ಮತ್ತು ಕೇರಳದ ತೆಯ್ಯಂ ಆರಾಧನೆಗಳು ಸಂಗಮಗೊಂಡಿರುವ ವಿಶಿಷ್ಟ ಪ್ರದೇಶವಾಗಿದೆ. ಆಧುನಿಕ ಕಾಲದಲ್ಲಿದೈವಾರಾಧನೆಯ ಪ್ರಪಂಚದಲ್ಲಿಅನೇಕ ಸ್ಥಿತ್ಯಂತರಗಳು ನಡೆದಿವೆ ಎಂದು ತಿಳಿಸಿದರು. ಕರಾವಳಿಯ ದೈವಾರಾಧನೆಯ ಕುರಿತು ವಿಶೇಷ ಅಧ್ಯಯನ ನಡೆಸಿರುವ ಅವರು ತುಳು ದೈವಾರಾಧನೆಯ ಕುರಿತು ಸಿದ್ಧಪಡಿಸಿದ ಕಿರುಚಿತ್ರವನ್ನು ಈ ಸಂದರ್ಭ ಪ್ರದರ್ಶಿಸಿದರು.
`ಯಕ್ಷಗಾನ: ಪ್ರದರ್ಶಕ ಕಲೆಗಳವೈವಿಧ್ಯತೆ'ಎಂಬ ವಿಷಯದಲ್ಲಿ ನವದೆಹಲಿಯ ಅಮೇರಿಕನ್ ಇನ್‍ಸ್ಟಿಟ್ಯೂಟ್ ಆಫ್‍ಇಂಡಿಯನ್ ಸ್ಟಡೀಸ್‍ನಿರ್ದೇಶಕ ಡಾ.ಪುರುಷೋತ್ತಮ ಬಿಳಿಮಲೆ ಪ್ರಬಂಧಮಂಡಿಸಿದರು. ಈ ಸಂದರ್ಭ ಮಾತನಾಡಿದ ಅವರು, ಯಕ್ಷಗಾನಕ್ಕೆ ಕಾಸರಗೋಡಿನ ಕೊಡುಗೆ ಅಪಾರವಾದುದು. ತೆಂಕುತಿಟ್ಟು ಯಕ್ಷಗಾನದ ಪ್ರವರ್ತಕ ಕುಂಬಳೆಯ ಪಾರ್ತಿಸುಬ್ಬ ಯಕ್ಷಗಾನದ ಆದಿಕವಿ ಮತ್ತು ಮಹಾಕವಿಯಾಗಿದ್ದಾರೆ. ಭಕ್ತಿ ಚಳುವಳಿಯಹಿನ್ನೆಲೆಯಲ್ಲಿ ಹುಟ್ಟಿಕೊಂಡ ಯಕ್ಷಗಾನ ಬಯಲಾಟವು ದ್ವೈತ ಮತದಪ್ರಭಾವದಿಂದ ಕೃಷ್ಣಭಕ್ತಿಯನ್ನು ಪ್ರಸಾರ ಮಾಡುವ ಮಾಧ್ಯಮಗಳಾಗಿ ಬೆಳೆದುಬಂದಿರುವುದಾಗಿ ತಿಳಿಸಿದರು.
ಕಾಸರಗೋಡು ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಬಾಲಕೃಷ್ಣ ಹೊಸಂಗಡಿ, ಡಾ.ರತ್ನಾಕರ ಮಲ್ಲಮೂಲೆ ಹಾಗೂ ಡಾ.ಆಶಾಲತಾ ಸಿ.ಕೆ. ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಅಂಗವಾಗಿ ಕಾಸರಗೋಡು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನಿರ್ದೇಶಕ ಕೆ.ವಿ.ರಮೇಶ್ ಅವರು ಯಕ್ಷಗಾನ ಬೊಂಬೆಗಳ ರಚನೆ ಮತ್ತು ಕುಣಿತದ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.