ಡೀರ್ ಅಲ್-ಬಾಲಾಹ್ : ಗಾಜಾ ಪಟ್ಟಿಯ ಅಲ್ ಶಿಫಾ ಆಸ್ಪತ್ರೆ ದ್ವಾರದ ಮುಂಭಾಗವೇ ಇಸ್ರೇಲ್ ಸೇನೆ ಹಾಗೂ ಹಮಾಸ್ ಬಂಡುಕೋರರ ನಡುವೆ ಕದನ ಮುಂದುವರಿದಿದ್ದು, ಆಸ್ಪತ್ರೆಯಲ್ಲಿ ಆಶ್ರಯ ಪಡೆದಿದ್ದ ಸಾವಿರಾರು ಜನರು ಪ್ರಾಣಭೀತಿಯಿಂದ ಹೊರಹೋಗಿದ್ದಾರೆ.
ಆದರೆ, ವಿದ್ಯುತ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ಚಿಕಿತ್ಸೆ ಪಡೆಯುತ್ತಿರುವ ನೂರಾರು ರೋಗಿಗಳು, ನವಜಾತ ಶಿಶುಗಳು, ಆಶ್ರಯ ಪಡೆದಿರುವ ನಾಗರಿಕರು ಅಪಾಯಕ್ಕೆ ಸಿಲುಕಿದ್ದಾರೆ ಎಂದು ಗಾಜಾ ಪಟ್ಟಿಯ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಆಸ್ಪತ್ರೆಯ ಜನರೇಟರ್‌ಗಳಿಗೆ ಪೂರೈಸಲು ಅನತಿ ದೂರದಲ್ಲಿ 300 ಲೀಟರ್‌ನಷ್ಟು ಇಂಧನ ಸಂಗ್ರಹಿಸಿ ಇಡಲಾಗಿದೆ. ಅದರ ಬಳಕೆಗೆ ಮುಂದಾಗಿರುವ ವೈದ್ಯಕೀಯ ಸಿಬ್ಬಂದಿಗೆ ಹಮಾಸ್ ತಡೆಯೊಡ್ಡಿದೆ ಎಂದು ಇಸ್ರೇನ್ ಸೇನೆ ಆರೋಪಿಸಿದೆ. ಆದರೆ, ನಿಗದಿಪಡಿಸಿರುವ ಈ ಇಂಧನವು ಜನರೇಟರ್‌ಗಳು ಕನಿಷ್ಠ ಒಂದು ಗಂಟೆಕಾಲವೂ ಕಾರ್ಯ ನಿರ್ವಹಿಸಲು ಸಾಕಾಗುವುದಿಲ್ಲ ಎಂದು ಆರೋಗ್ಯ ಸಚಿವಾಲಯ ದೂರಿದೆ.
'ಮೂರು ದಿನಗಳಿಂದಲೂ ಆಸ್ಪತ್ರೆಗೆ ನೀರು ಪೂರೈಕೆ ಸ್ಥಗಿತಗೊಂಡಿದೆ. ಹಾಗಾಗಿ, ಯಾವ ಕ್ಷಣದಲ್ಲಾದರೂ ತನ್ನ ಕಾರ್ಯ ಸ್ಥಗಿತಗೊಳಿಸುವ ಸಾಧ್ಯತೆಯಿದೆ' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಎಷ್ಟು ಜನರಿದ್ದಾರೆ?: 'ತೀವ್ರ ಗಾಯಗೊಂಡವರು ಸೇರಿದಂತೆ 650 ರೋಗಿಗಳು ಶಿಫಾ ಆಸ್ಪತ್ರೆಯಲ್ಲಿದ್ದಾರೆ. ಸುಮಾರು 500 ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆಯಲ್ಲಿ ನಿರತರಾಗಿದ್ದಾರೆ. ಇದರ ಹೊರತಾಗಿ ಆಸ್ಪತ್ರೆಯ ಕಟ್ಟಡದೊಳಗೆ ಸುಮಾರು 2,500 ಜನರು ಆಶ್ರಯ ಪಡೆದಿದ್ದಾರೆ' ಎಂದು ಗಾಜಾ ಆಸ್ಪತ್ರೆಗಳ ನಿರ್ದೇಶಕ ಮೊಹಮ್ಮದ್ ಜಖೌತ್ ಮಾಹಿತಿ ನೀಡಿದ್ದಾರೆ.
32 ರೋಗಿಗಳು ಸಾವು
ಕೈರೊ: ಅಲ್ ಶಿಫಾ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಲ್ಲಿ ಕನಿಷ್ಠ 32 ರೋಗಿಗಳು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಆಸ್ಪತ್ರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹಾಗಾಗಿ ಶನಿವಾರದಿಂದ ಸಮರ್ಪಕವಾಗಿ ವೈದ್ಯಕೀಯ ಸೇವೆಗೂ ಅಡಚಣೆಯಾಗಿದೆ ಎಂದು ಹೇಳಿದೆ.
' ಆಂಬುಲೆನ್ಸ್‌ಗಳ ಮೇಲೆ ಗುಂಡಿನ ದಾಳಿ ನಡೆಯುವ ಸಾಧ್ಯತೆ ಇದೆ. ಹಾಗಾಗಿ ರೋಗಿಗಳು ಆಸ್ಪತ್ರೆಯಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ' ಎಂದು ಆಸ್ಪತ್ರೆಯ ನಿರ್ದೇಶಕ ಮೊಹಮ್ಮದ್ ಅಬು ಸೆಲ್ಮಿಯಾ 'ಎಎಫ್‌ಪಿ' ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
'ಹಮಾಸ್ ಬಂಡುಕೋರರು ನಾಗರಿಕರನ್ನು ಹೇಗೆ ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ಶಿಫಾ ಆಸ್ಪತ್ರೆ ಉದಾಹರಣೆಯಾಗಿದೆ. ಆಸ್ಪತ್ರೆಯ ಆವರಣವನ್ನು ತನ್ನ ನೆಲೆಯಾಗಿಸಿಕೊಂಡಿದ್ದಾರೆ. ಯುದ್ಧ ಉಪಕರಣಗಳನ್ನು ಅಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಾರೆ' ಎಂದು ಇಸ್ರೇಲ್ ಆರೋಪಿಸಿದೆ.