ಡೆಹ್ರಾಡೂನ್: 'ವೈಬರೆಂಟ್ ವಿಲೇಜ್' ಪರಿಕಲ್ಪನೆಯನ್ನು ಪರಿಚಯಿಸುವ ಮೂಲಕ ಗಡಿ ಗ್ರಾಮಗಳಿಗೆ ಉತ್ತಮ ಸವಲತ್ತು ಒದಗಿಸುವುದನ್ನು ಕೇಂದ್ರ ಸರ್ಕಾರ ಆದ್ಯತೆಯಾಗಿರಿಸಿಕೊಂಡಿದೆ ಎಂದು ಗೃಹ ಸಚಿವ ಅಮಿತ್ ಶಾ ಶುಕ್ರವಾರ ತಿಳಿಸಿದ್ದಾರೆ.
ಡೆಹ್ರಾಡೂನ್: 'ವೈಬರೆಂಟ್ ವಿಲೇಜ್' ಪರಿಕಲ್ಪನೆಯನ್ನು ಪರಿಚಯಿಸುವ ಮೂಲಕ ಗಡಿ ಗ್ರಾಮಗಳಿಗೆ ಉತ್ತಮ ಸವಲತ್ತು ಒದಗಿಸುವುದನ್ನು ಕೇಂದ್ರ ಸರ್ಕಾರ ಆದ್ಯತೆಯಾಗಿರಿಸಿಕೊಂಡಿದೆ ಎಂದು ಗೃಹ ಸಚಿವ ಅಮಿತ್ ಶಾ ಶುಕ್ರವಾರ ತಿಳಿಸಿದ್ದಾರೆ.
ಇಂಡೊ-ಟಿಬೆಟಿಯನ್ ಗಡಿ ಪೊಲೀಸ್ ಪಡೆ (ಐಟಿಬಿಪಿ)ಯ 62ನೇ ಸಂಸ್ಥಾಪನಾ ದಿನದಲ್ಲಿ ಮಾತನಾಡಿದ ಅಮಿತ್ ಶಾ, 'ಗಡಿ ಗ್ರಾಮಗಳು ಬರಿದಾದರೆ ಅಲ್ಲಿ ಭದ್ರತೆ ಕಷ್ಟವಾಗುತ್ತದೆ' ಎಂದರು.
'ಕೇಂದ್ರ ಸರ್ಕಾರವು ಗಡಿ ಗ್ರಾಮಗಳನ್ನು 'ಮೊದಲ ಗ್ರಾಮಗಳು' ಎಂದು ಪರಿಗಣಿಸಲು ಬಯಸುತ್ತದೆ. ಇದು ಕೇವಲ ಭೌಗೋಳಿಕ ಕಾರಣಕ್ಕೆ ಮಾತ್ರವಲ್ಲ. ಬದಲಿಗೆ, ಸವಲತ್ತು ಒದಗಿಸುವ ವಿಷಯದಲ್ಲೂ ಅನ್ವಯವಾಗಲಿದೆ' ಎಂದು ಅವರು ಹೇಳಿದರು.
'ಗಡಿ ಗ್ರಾಮಗಳ ಜನರಿಗೆ ಉತ್ತಮ ಸವಲತ್ತು ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ವೈಬರೆಂಟ್ ವಿಲೇಜ್ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದ್ದಾರೆ. ಇದು, ಗಡಿ ಗ್ರಾಮಗಳ ಜನಸಂಖ್ಯೆಯನ್ನು ಕಾಪಾಡಲಿದೆ, ಹೆಚ್ಚಿಸಲಿದೆ' ಎಂದು ಅಭಿಪ್ರಾಯಪಟ್ಟರು.
'ದೇಶದ 19 ಜಿಲ್ಲೆಗಳ 662 ಗಡಿ ಗ್ರಾಮಗಳಲ್ಲಿ ಮೂಲಸೌಲಭ್ಯ, ಆರೋಗ್ಯ, ಶಿಕ್ಷಣದ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ₹4,800 ಕೋಟಿ ಒದಗಿಸಿದೆ. ಇಲ್ಲಿನ ಅಭಿವೃದ್ಧಿ ಕಾರ್ಯಗಳ ಮೇಲ್ವಿಚಾರಣೆಗೆ ಐಟಿಬಿಪಿಯನ್ನು ನೋಡಲ್ ಏಜೆನ್ಸಿಯನ್ನಾಗಿ ಮಾಡಲಾಗುತ್ತದೆ' ಎಂದು ಅವರು ಇದೇ ವೇಳೆ ತಿಳಿಸಿದರು.
ಚೀನಾದ ಗಡಿಗೆ ಹೊಂದಿಕೊಂಡಿರುವ ಪ್ರದೇಶಕ್ಕಾಗಿ 2014ಕ್ಕೂ ಹಿಂದೆ ₹4,000 ಕೋಟಿ ವಿನಿಯೋಗಿಸಲಾಗಿತ್ತು. 2022-23ರ ಹೊತ್ತಿಗೆ ಆ ಮೊತ್ತ ₹12,430 ಕೋಟಿಗೆ ಏರಿದೆ ಎಂದು ಅವರು ತಿಳಿಸಿದರು.