ಚೆನ್ನೈ: ತಮಿಳುನಾಡಿನ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕಮ್ಯೂನಿಸ್ಟ್ ಚಳವಳಿಯ ಹಿರಿಯ ನಾಯಕ ಎನ್. ಶಂಕರಯ್ಯ (101) ಬುಧವಾರ ನಿಧನರಾದರು.
ಸಿಪಿಎಂನ ಹಿರಿಯ ನಾಯಕರಾದ ಅವರಿಗೆ ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಆಲ್ ಇಂಡಿಯಾ ಕಿಸಾನ್ ಸಭಾದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 1995ರಿಂದ 2002ರ ವರೆಗೆ ತಮಿಳುನಾಡಿನ ಸಿಪಿಎಂ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಪಕ್ಷದ ರಾಜ್ಯ ರೈತ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಅವರು ಜನಿಸಿದ್ದು 1922ರ ಜುಲೈ 15ರಂದು. ಹುಟ್ಟೂರು ಕೋವಿಲ್‌ಪಟ್ಟಿ. ಮದುರೈನ ಅಮೆರಿಕನ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುವಾಗಲೇ ಬ್ರಿಟಿಷ್ ಆಡಳಿತದ ವಿರುದ್ಧ ವಿದ್ಯಾರ್ಥಿಗಳನ್ನು ಸಂಘಟಿಸಿದ್ದರು. ಹಾಗಾಗಿ, ಅಂತಿಮ ಪರೀಕ್ಷೆಗೆ ಇನ್ನೂ 15 ದಿನ ಇರುವಾಗಲೇ ಅವರನ್ನು ಬಂಧಿಸಲಾಗಿತ್ತು. ಇದರಿಂದಾಗಿ ಅವರು ಪದವಿ ಶಿಕ್ಷಣ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಸ್ವಾತಂತ್ರ್ಯ ಹೋರಾಟದ ವೇಳೆ ಐದು ವರ್ಷ ಕಾಲ ಅವರು ಜೈಲುವಾಸ ಅನುಭವಿಸಿದ್ದರು. ಸ್ವಾತಂತ್ರ್ಯ ನಂತರವೂ ಜನಸಾಮಾನ್ಯರ ಸಮಸ್ಯೆಗಳ ಪರವಾದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ನಾಲ್ಕು ವರ್ಷ ಸಜೆ ಅನುಭವಿಸಿದ್ದರು.
ಜೀವನವಿಡೀ ಶ್ರಮಿಕರ ಪರ ಹೋರಾಟದಲ್ಲಿ ತೊಡಗಿದ್ದ ಅವರು, ಮದುರೈನಲ್ಲಿ ನಡೆದ ದೇಗುಲ ಪ್ರವೇಶ ಚಳವಳಿಯಲ್ಲೂ ಪಾಲ್ಗೊಂಡಿದ್ದರು.
ಸಕಲ ಸರ್ಕಾರಿ ಗೌರವದೊಂದಿಗೆ ಶಂಕರಯ್ಯ ಅವರ ಅಂತ್ಯಸಂಸ್ಕಾರ ನಡೆಸುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೂಚಿಸಿದ್ದಾರೆ.
ಡಾಕ್ಟರೇಟ್ ಗೌರವ ಸಿಗಲಿಲ್ಲ:
ಮದುರೈ ಕಾಮರಾಜ್ ವಿಶ್ವವಿದ್ಯಾಲಯದಿಂದ ಶಂಕರಯ್ಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ಸರ್ಕಾರ ಘೋಷಿಸಿತ್ತು. ಆದರೆ, ತಮಿಳುನಾಡಿನ ಸ್ವಾತಂತ್ರ್ಯದ ಹೋರಾಟದ ಬಗ್ಗೆ ಅರಿವಿಲ್ಲದ ಕೆಲವು ಸಂಕುಚಿತ ವ್ಯಕ್ತಿಗಳ ಸಂಚಿನಿಂದಾಗಿ ಆ ಗೌರವದಿಂದ ಅವರು ವಂಚಿತರಾಗಬೇಕಾಯಿತು ಎಂದು ರಾಜ್ಯಪಾಲ ಆರ್.ಎನ್. ರವಿ ಅವರ ಹೆಸರು ಉಲ್ಲೇಖಿಸದೆ ಸ್ಟಾಲಿನ್ ಟೀಕಿಸಿದ್ದಾರೆ.