ಮುಳ್ಳೇರಿಯ: ದಕ್ಷಿಣ ಕನ್ನಡ ಜಿಲ್ಲೆಯನ್ನು ಕೇಂದ್ರೀಕರಿಸಿ ಕಾರ್ಯ ನಿರ್ವಹಿಸುತ್ತಿರುವ "ಮೇಕ್ ಸಮ್ ವನ್ ಸೆ`್ಮಲ್- ಹೆಲ್ಪಿಂಗ್ ಹ್ಯಾಂಡ್" ಎಂಬ ಖಾಸಗಿ ಸಂಘಟನೆ ನೇತೃತ್ವದಲ್ಲಿ ಬೆಳ್ಳೂರು ಗ್ರಾಪಂ ನೆಟ್ಟಣಿಗೆ ಸಮೀಪದ ಕಕ್ಕೆಬೆಟ್ಟು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ನವೀಕರಿಸಿದ ಕಟ್ಟಡವನ್ನು ಉದ್ಘಾಟಿಸಲಾಯಿತು.
ಸಂಘಟನೆ ಸದಸ್ಯ ಪ್ರಮೋದ್ ಕುಮಾರ್ ಉದ್ಘಾಟಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನವೀನ ಕುಮಾರ್ ಆಜಡ್ಕ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳೂರು ಗ್ರಾ.ಪಂ. ಅಧ್ಯಕ್ಷ ಶ್ರೀಧರ ಎಂ., ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀಧರ ಕಡಂಬಳಿತ್ತಾಯ, ಸಾಹಿತಿ, ಕೊಡುಗೈ ದಾನಿ ಪ್ರಭಾಕರ ಕಲ್ಲೂರಾಯ ಬನದಗದ್ದೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಶಾಲಾ ವ್ಯವಸ್ಥಾಪಕ ನವೀನ ಕಮಾರ್ ಮತ್ತು ಊರಿನ ಹಿರಿಯರಾದ ಗೋವಿಂದ ನಾಯ್ಕ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ವೀಣಾ ಕುಮಾರಿ ಸ್ವಾಗತಿಸಿ, ಶಿಕ್ಷಕ ವಿಠಲ ಎ.ವಂದಿಸಿದರು. ಶಿಕ್ಷಕಿ ನಳಿನಾವತಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಘಟನೆಯ ಸದಸ್ಯರು ಮಕ್ಕಳ ಜೊತೆ ಸೇರಿ ವೈವಿಧ್ಯಮಯ ಮನೊರಂಜನಾ ಚಟುವಟಿಕೆಗಳನ್ನು ನಡೆಸಿಕೊಟ್ಟರು.
ಸಂಘಟನೆ ಶಾಲೆಯ ಮಾಡಿಗೆ ಕಬ್ಬಿಣದ ಪಟ್ಟಿ ಅಳವಡಿಸಿದ್ದಲ್ಲದೆ ಶಾಲಾ ಕಟ್ಟಡದ ಹೊರ ಗೋಡೆಯಲ್ಲಿ ಯಕ್ಷಗಾನ, ಕಥಕ್ಕಳಿ, ಮೋಹಿನಿಯಾಟ್ಟಂ ಮೊದಲಾದ ಕಲಾಪ್ರಕಾರಗಳು, ಕಂಬಳ, ಹುಲಿವೇಷ, ಕಳರಿಪ್ಪಯಟ್ಟ್, ಅಂಬಾರಿ ಮೆರವಣಿಗೆ, ದೋಣಿ ಓಟ ಮತ್ತಿತರ ಆಕರ್ಷಕ ಭಿತ್ತಿ ಚಿತ್ರಗಳನ್ನು ರಚಿಸಿದ್ದಾರೆ.