ನವದೆಹಲಿ: ತೀವ್ರವಾದ ಪೈಪೋಟಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ತಮ್ಮ ಮಕ್ಕಳ ಮೇಲೆ ಪಾಲಕರು ಹೇರುವ ಒತ್ತಡವೇ ದೇಶದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಲು ಪ್ರಮುಖ ಕಾರಣಗಳು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಕೋಚಿಂಗ್ ಕೇಂದ್ರಗಳ ನಿಯಂತ್ರಣಕ್ಕಾಗಿ ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಮಾತು ಹೇಳಿದೆ.
'ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಪಾಲಕರ ಒತ್ತಡವೇ ಪ್ರಮುಖ ಕಾರಣ. ಇಂತಹ ಸನ್ನಿವೇಶದಲ್ಲಿ ನ್ಯಾಯಾಲಯ ನಿರ್ದೇಶನ ನೀಡುವುದಾದರೂ ಹೇಗೆ' ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಎಸ್.ವಿ.ಎನ್.ಭಟ್ಟಿ ಅವರಿದ್ದ ನ್ಯಾಯಪೀಠವು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು.
ಮುಂಬೈ ಮೂಲದ ವೈದ್ಯ ಅನಿರುದ್ಧ ನಾರಾಯಣ ಮಾಲ್ಪಾನಿ ಅವರು ವಕೀಲೆ ಮೋಹಿನಿ ಪ್ರಿಯಾ ಅವರ ಮೂಲಕ ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ.
'ದೇಶದಲ್ಲಿ ಕೋಚಿಂಗ್ ಕೇಂದ್ರಗಳೇ ಇರಬಾರದು ಎಂಬುದು ನಮ್ಮಲ್ಲಿನ ಬಹುತೇಕರ ಬಯಕೆ. ಆದರೆ, ಶಾಲೆಗಳ ಸ್ಥಿತಿ ನೋಡಿ ಹೇಗಿದೆ. ಇನ್ನೊಂದೆಡೆ ತೀವ್ರವಾದ ಸ್ಪರ್ಧೆ ಇದೆ. ಈ ಎಲ್ಲ ಕಾರಣಗಳಿಂದಾಗಿ ಕೋಚಿಂಗ್ ಕೇಂದ್ರಗಳ ಕದ ತಟ್ಟುವುದನ್ನು ಬಿಟ್ಟರೆ ವಿದ್ಯಾರ್ಥಿಗಳ ಮುಂದೆ ಬೇರೆ ಆಯ್ಕೆ ಇಲ್ಲ' ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು.
'ದೇಶದಲ್ಲಿ ಸಂಭವಿಸಿದ ವಿದ್ಯಾರ್ಥಿಗಳ ಸಾವುಗಳ ಪೈಕಿ ಶೇ 8.2ರಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೊದ (ಎನ್‌ಸಿಆರ್‌ಬಿ) 2020ರ ದತ್ತಾಂಶಗಳು ಹೇಳುತ್ತವೆ' ಎಂದು ವಕೀಲೆ ಮೋಹಿನಿಪ್ರಿಯಾ ಅವರು ನ್ಯಾಯಪೀಠಕ್ಕೆ ತಿಳಿಸಿದರು.
'ಈ ವಿಚಾರವಾಗಿ ದೇಶದಲ್ಲಿರುವ ಪರಿಸ್ಥಿತಿಯ ಅರಿವು ನ್ಯಾಯಪೀಠಕ್ಕಿದೆ. ಆದಾಗ್ಯೂ, ಕೋಚಿಂಗ್ ಕೇಂದ್ರಗಳ ನಿಯಂತ್ರಣಕ್ಕೆ ಸಂಬಂಧಿಸಿ ನ್ಯಾಯಾಲಯ ನಿರ್ದೇಶನ ನೀಡಲು ಸಾಧ್ಯ ಇಲ್ಲ. ಈ ವಿಷಯವಾಗಿ ನೀವು ಸರ್ಕಾರಕ್ಕೆ ಮನವಿ ಸಲ್ಲಿಸಿ' ಎಂದು ಮೋಹಿನಿ ಪ್ರಿಯಾ ಅವರನ್ನು ಉದ್ಧೇಶಿಸಿ ನ್ಯಾಯಪೀಠ ಹೇಳಿತು.
ಆಗ, ಅರ್ಜಿಯನ್ನು ವಾಪಸ್ ಪಡೆಯುವುದಾಗಿ ಹೇಳಿದ ಪ್ರಿಯಾ, ಸೂಕ್ತ ವೇದಿಕೆಯನ್ನು ಸಂಪರ್ಕಿಸುವುದಾಗಿ ತಿಳಿಸಿದರು. ಇದಕ್ಕೆ ನ್ಯಾಯಪೀಠ ಸಮ್ಮತಿಸಿತು.
ಅರ್ಜಿದಾರರ ವಾದ ಏನಿತ್ತು: ಐಐಟಿ-ಜೆಇಇ, ನೀಟ್‌ನಂತಹ ಪರೀಕ್ಷೆಗಳಿಗೆ ತರಬೇತಿ ನೀಡುವ ಹೆಸರಿನಲ್ಲಿ ದೇಶದಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಕೋಚಿಂಗ್ ಕೇಂದ್ರಗಳು ತಲೆಯೆತ್ತುತ್ತಿವೆ. ಹಣ ಗಳಿಸುವುದೇ ಈ ಕೇಂದ್ರಗಳ ಮುಖ್ಯ ಉದ್ದೇಶ ಎಂದು ಮಾಲ್ಪಾನಿ ಅವರು ಅರ್ಜಿಯಲ್ಲಿ ವಿವರಿಸಿದ್ದರು.
'14 ವರ್ಷ ವಯೋಮಾನದ ಮಕ್ಕಳು ಈ ಕೋಚಿಂಗ್ ಕೇಂದ್ರಗಳಲ್ಲಿ ಪ್ರವೇಶ ಪಡೆಯುತ್ತಾರೆ. ಮನೆಯಿಂದ ದೂರ ಉಳಿಯುವ ಈ ಮಕ್ಕಳು, ದೇಶದ ಉತ್ತಮ ವೈದ್ಯಕೀಯ ಇಲ್ಲವೇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಗಿಟ್ಟಿರುವ ಆಸೆಯಿಂದ ಕಠಿಣ ತರಬೇತಿಗೆ ಒಳಗಾಗಿ, ಸಿದ್ಧತೆ ಮಾಡಿಕೊಳ್ಳುತ್ತಾರೆ'
'ಮನೆಯಲ್ಲಿನ ಸುರಕ್ಷಿತ ಪರಿಸರದಲ್ಲಿ ಬೆಳೆಯುವ ಮಕ್ಕಳು, ಮಾನಸಿಕವಾಗಿ ಯಾವುದೇ ತಯಾರಿ ಇಲ್ಲದೆಯೇ ಘೋರವಾದ ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳುತ್ತಾರೆ. ಮಕ್ಕಳ ಸುರಕ್ಷತೆ ಬಗ್ಗೆ ಕೋಚಿಂಗ್ ಕೇಂದ್ರಗಳು ಗಮನ ಕೊಡುವುದಿಲ್ಲ. ಲಾಭ ಮಾಡಿಕೊಳ್ಳುವುದಷ್ಟೇ ಅವುಗಳ ಗುರಿಯಾಗಿರುತ್ತದೆ. ಈ ಎಲ್ಲ ವಿದ್ಯಮಾನಗಳು ದೇಶದ ಯುವ ಸಮುದಾಯದ ಮೇಲೆ ವಿಪರೀತ ಒತ್ತಡಕ್ಕೆ ಕಾರಣವಾಗುತ್ತವೆ. ಕೊನೆಗೆ ಅವರು ಆತ್ಮಹತ್ಯೆಗೆ ಶರಣವಾಗುವಂತೆ ಮಾಡುತ್ತವೆ' ಎಂದು ಅವರು ಅರ್ಜಿಯಲ್ಲಿ ವಿವರಿಸಿದ್ದರು.