ಕಾಸರಗೋಡು: ಕೇರಳದ ಆರ್ಥಿಕ ಸ್ಥಿತಿಗತಿ ಬಗ್ಗೆ ಸರ್ಕಾರ ತಕ್ಷಣ ಶ್ವೇತಪತ್ರ ಹೊರಡಿಸುವಂತೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ, ಹಿರಿಯ ಮುಖಂಡ ಪಿ.ಕೆ ಕೃಷ್ಣದಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೇರಳದ ಎಡರಂಗ ಸರ್ಕಾರದ ತಪ್ಪು ಆರ್ಥಿಕ ನೀತಿ ಹಾಗೂ ಜನವಿರೋಧಿ ಧೋರಣೆಗಳಿಂದ ರಾಜ್ಯ ಆರ್ಥಿಕ ದಿವಾಳಿಯತ್ತ ಸಾಗುವಂತಾಗಿದೆ. ತನ್ನ ವೈಫಲ್ಯ ಮುಚ್ಚಿಹಾಕಲು ಎಡರಂಗ ಸರ್ಕಾರ ಕೇಂದ್ರವನ್ನು ನಿರಂತರ ದೂಷಿಸುತ್ತಿದ್ದು, ಈ ಧೋರಣೆ ಕೈಬಿಡಬೇಕು. ಕೇರಳಕ್ಕೆ2000ರಿಂದ 2014ರ ವರೆಗೆ ಹಾಗೂ 2014ರಿಂದ 2023ರ ವರೆಗೆ ಕೇಂದ್ರ ಸರ್ಕಾರದಿಂದ ಲಭಿಸಿದ ಅನುದಾನದ ಮೊತ್ತದ ಬಗ್ಗೆ ಶ್ವೇತಪತ್ರ ಹೊರಡಿಸಲು ಸರ್ಕಾರ ಮುಂದಾಗಬೇಕು. ಈ ಹಿಂದಿನ ಯುಪಿಎ ಸರ್ಕಾರ ಹಾಗೂ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಕೇರಳಕ್ಕೆ ನೀಡಿರುವ ಮೊತ್ತಗಳ ಬಗ್ಗೆ ತುಲನೆಯಾಗಬೇಕು. ಕೇಂದ್ರ ಮೊತ್ತ ನೀಡುತ್ತಿಲ್ಲ ಎಂಬ ನಿರಂತರ ಸುಳ್ಳು ಆರೋಪ ಕೈಬಿಟ್ಟು, ಸಿಎಂ ಹಾಗೂ ಹಣಕಾಸು ಸಚಿವರು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ ತಮಗೆ ಬರಬೇಕಾದ ಮೊತ್ತ ಲಭಿಸಲು ಅವಕಾಶ ಮಂಡಿಸಲಿ. ತಮ್ಮ ಆಡಳಿತ ವೈಫಲ್ಯ ಮುಚ್ಚಿಹಾಕಲು ನರೇಂದ್ರ ಮೋದಿ ಸರ್ಕಾರವನ್ನು ಎಡರಂಗ ನಿರಂತರ ಟೀಕಿಸುತ್ತಿದೆ. ಆಡಳಿತ ನಡೆಸಲಾಗದಿದ್ದಲ್ಲಿ ಪಿಣರಾಯಿ ವಿಜಯನ್ ಸರ್ಕಾರ ರಾಜೀನಾಮೆ ಸಲ್ಲಿಸಿ ಹೊರಬರಲಿ.
ಗುತ್ತಿಗೆದಾರರು, ಪಿಂಚಣಿದಾರರು, ಕೆಎಸ್ಸಾರ್ಟಿಸಿ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಮಿಕರಿಗೆ ವೇತನ ನೀಡಲು ಸರ್ಕಾರದಲ್ಲಿ ಹಣವಿಲ್ಲ. ಆದರೆ ಮೋಜು, ಆಡಂಬರಕ್ಕಾಗಿ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ಶೇ. 24ರಷ್ಟು ಅಂದರೆ ಸುಮಾರು 22ಸಾವಿರ ಕೋಟಿ ರೂ. ತೆರಿಗೆ ವಸೂಲಿ ಬಾಕಿಯಿದ್ದು, ಇದನ್ನು ವಸೂಲಿಮಾಡಲು ಸರ್ಕಾರ ಮುಂದಾಗುತ್ತಿಲ್ಲ. ಬದಲು ತೆರಿಗೆ ಕಳ್ಳರಿಂದ ವಸೂಲಿ ದಂಧೆಗಿಳಿದಿರುವುದು ವಿಪರ್ಯಾಸ. ನವಕೇರಳ ಸದಸ್ ಹೆಸರಲ್ಲಿ ನಡೆಸುತ್ತಿರುವ ದುಂದುವೆಚ್ಚಗಳಿಗೆ ತೆರಿಗೆ ಕೊಳ್ಳೆ ಹೊಡೆದಿರುವವರನ್ನೂ ಸ್ಪಾನ್ಸರ್‍ಗಳನ್ನಾಗಿ ಮಾಡಿಕೊಂಡು, ಅವರಿಂದ ಹಣ ವಸೂಲಿಗೆ ಸರ್ಕಾರ ಮುಂದಾಗಿದೆ. ಈ ಸ್ಪಾನ್ಸರ್‍ಗಳು ಮುಂದೆ ಸರ್ಕಾರವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವುದು ಖಚಿತ. ಸರ್ಕಾರದ ವೈಫಲ್ಯ ಎತ್ತಿ ತೋರಿಸಬೇಕಾದ ಪ್ರಧಾನ ಪ್ರತಿಪಕ್ಷ ಐಕ್ಯರಂಗ ಮೌನ ಪಾಲಿಸಿದೆ. ರಾಷ್ಟ್ರಮಟ್ಟದಲ್ಲಿ ಐಎನ್‍ಡಿಐಎ ಮಿತ್ರಪಕ್ಷವಾಗಿರುವ ಎಡರಂಗ ಮತ್ತು ಐಕ್ಯರಂಗ ಕೇರಳದಲ್ಲಿನ ಭ್ರಷ್ಟಾಚಾರಗಳಿಗೆ ಸಮಾನ ಕಾರಣರಾಗಿದ್ದಾರೆ. ಕೇರಳದಲ್ಲಿ ಮುಸ್ಲಿಂ ಲೀಗ್ ಕಾಂಗ್ರೆಸ್ ಅಥವಾ ಎಡರಂಗದ ಜತೆಗಿದ್ದೇವೆಯೋ ಎಂಬ ಬಗ್ಗೆ ತಮ್ಮಲ್ಲೇ ಗೊಂದಲದಲ್ಲಿದೆ. ಎಡರಂಗದ ಮಿತ್ರಪಕ್ಷ ಸಿಪಿಐನಲ್ಲೂ ಕೂಡಾ ಇದೇ ಗೊಂದಲವಿದೆ. ಕೇರಳದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಒಕ್ಕೂಟ ಪ್ರಧಾನ ಪ್ರತಿಪಕ್ಷವಾಗಿ ಕಾರ್ಯಾಚರಿಸುತ್ತಿರುವುದಾಗಿ ಪಿ.ಕೆ ಕೃಷ್ಣದಾಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಬಿಜೆಪಿ ಮುಖಂಡ ಟಿ.ವಿ ಶಿಬಿನ್ ಉಪಸ್ಥಿತರಿದ್ದರು.