ತಿರುವನಂತಪುರಂ: ದೀಪಾವಳಿಯಂದು ಪಟಾಕಿ ಸಿಡಿಸುವುದಕ್ಕೆ ಸರ್ಕಾರ ನಿರ್ಬಂಧ ಹೇರಿದೆ. ಕಡಿಮೆ ವಾಯುಮಾಲಿನ್ಯ ಹೊಂದಿರುವ ಹಸಿರು ಪಟಾಕಿಗಳನ್ನು ಬಳಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಶಿಫಾರಸಿನ ಮೇರೆಗೆ ರಾಜ್ಯ ಸರ್ಕಾರದ ಆದೇಶ ನೀಡಿದೆ.
ಪಟಾಕಿ ಸಿಡಿಸುವ ಸಮಯ ರಾತ್ರಿ 8ರಿಂದ 10ರವರೆಗೆ ಮಾತ್ರ. ಆದರೆ, ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಆಚರಣೆಗಾಗಿ ರಾತ್ರಿ 11:55 ರಿಂದ 12:30 ರವರೆಗೆ ಪಟಾಕಿ ಸಿಡಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ವಾಯು ಮಾಲಿನ್ಯ ತಗ್ಗಿಸಲು ಕ್ರಮಕೈಗೊಳ್ಳಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲೀಸ್ ಮುಖ್ಯಸ್ಥರು ಸರ್ಕಾರ ವಿಧಿಸಿರುವ ನಿಬಂಧನೆಗಳನ್ನು ಅನುಸರಿಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.
ಹಸಿರು ಪಟಾಕಿ ಎಂದರೆ ರಾಸಾಯನಿಕಗಳಿಂದ ಮುಕ್ತವಾಗಿದ್ದು ಸಿಡಿಯುವಾಗ ವಾಯು ಮಾಲಿನ್ಯವನ್ನು ಉಂಟುಮಾಡುವುದಿಲ್ಲ. ಈ ರೀತಿಯ ಕ್ರ್ಯಾಕರ್‍ಗಳನ್ನು ತಯಾರಿಸುವ ಕೆಲವು ಕೇಂದ್ರಗಳಿವೆ. ಪಟಾಕಿ ಸಾಮಾನ್ಯವಾಗಿ ತಮಿಳುನಾಡಿನಿಂದ ಕೇರಳ ತಲುಪುತ್ತದೆ.