ಕರಾಚಿ: ಚೀನಾ ಮತ್ತು ಪಾಕಿಸ್ತಾನ ನೌಕಾಪಡೆಗಳು ಅರಬ್ಬಿ ಸಮುದ್ರದಲ್ಲಿ ಜಂಟಿ ಸಮರಾಭ್ಯಾಸ ಆರಂಭಿಸಿವೆ.
'ಕಡಲ ಭದ್ರತಾ ಬೆದರಿಕೆಗಳಿಗೆ ಜಂಟಿ ಪ್ರತಿಕ್ರಿಯೆ' ಎಂಬ ಘೋಷವಾಕ್ಯದಲ್ಲಿ, ಉತ್ತರ ಅರಬ್ಬಿ ಸಮುದ್ರ ಮತ್ತು ವಾಯುಪ್ರದೇಶದಲ್ಲಿ ನಡೆಯುವ ಈ ತಾಲೀಮಿಗೆ 'ಸೀ ಗಾರ್ಡಿಯನ್-3' ಎಂಬ ಹೆಸರು ನೀಡಲಾಗಿದೆ.
ತಾಲೀಮಿನ ವೇಳೆ, ಜಲಾಂತರ್ಗಾಮಿ ವಿರುದ್ಧದ ಕಾರ್ಯಾಚರಣೆಯನ್ನೂ ನಡೆಸಲಾಗುತ್ತದೆ ಎಂದು ಪಾಕಿಸ್ತಾನದ ಸುದ್ದಿ ಮಾಧ್ಯಮ 'ಡಾನ್ ನ್ಯೂಸ್' ವರದಿ ಮಾಡಿದೆ.
ಚೀನಾ ಮತ್ತು ಪಾಕಿಸ್ತಾನದ ನೌಕಾಪಡೆಗಳೆರಡೂ ಇದೇ ಮೊದಲ ಬಾರಿಗೆ ಸಾಗರ ಗಸ್ತು ನಡೆಸಲಿವೆ. ಇದರ ಜತೆಗೆ, ಯುದ್ಧ ನೌಕೆ ಮೇಲೆ ಹೆಲಿಕಾಪ್ಟರ್ ಇಳಿಯುವ ಪ್ರಕ್ರಿಯೆಯೂ ಸೇರಿದಂತೆ ಹಲವು ಬಗೆಯ ತಾಲೀಮುಗಳನ್ನು ನಡೆಸಲಾಗುತ್ತದೆ ಎಂದು ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ, ಹಿರಿಯ ಕರ್ನಲ್ ವು ಕ್ವೈನ್ ತಿಳಿಸಿದ್ದಾರೆ.
ಎರಡೂ ದೇಶಗಳ ನಡುವಿನ ಸರ್ವಋತು ಕಾರ್ಯತಂತ್ರದ ಪಾಲುದಾರಿಕೆ ಮತ್ತು ಸಾಂಪ್ರದಾಯಿಕ ಸ್ನೇಹ ಸಂಬಂಧವನ್ನು ಗಟ್ಟಿಯಾಗಿಸುವುದು, ವಾಸ್ತವಿಕ ಸಮರಾಭ್ಯಾಸಕ್ಕಾಗಿ ಈ ತಾಲೀಮು ನಡೆಯುತ್ತಿದೆ ಎಂದು ವಕ್ತಾರ ವೂ ತಿಳಿಸಿದರು.
ಚೀನಾ ಮತ್ತು ಪಾಕಿಸ್ತಾನದ ನೌಕಾಪಡೆಗಳು ನಡುವೆ ಅರಬ್ಬಿ ಸಮುದ್ರದಲ್ಲಿ ನಡೆಯುತ್ತಿರುವ ಎರಡನೇ ಜಂಟಿ ಸಮಾರಾಭ್ಯಾಸವಿದು.
ಯುದ್ಧನೌಕೆಗಳ ಲಂಗರು: ಒಂದು ವಾರ ಕಾಲ ನಡೆಯುವ ಈ ಸಮಾರಾಭ್ಯಾಸದಲ್ಲಿ ಪಾಲ್ಗೊಳ್ಳಲು ಚೀನಾದ ಮುಂಚೂಣಿ ಯುದ್ಧನೌಕೆಗಳು, ಜಲಾಂತರ್ಗಾಮಿಗಳು, ನೌಕಾಪಡೆಯ ಬೆಂಗಾವಲು ಹಡಗುಗಳು ಕರಾಚಿ ಬಂದರಿನಲ್ಲಿ ಲಂಗರು ಹಾಕಿವೆ. ಇದಕ್ಕೆ ಸಂಬಂಧಿಸಿದ ಉತ್ಕೃಷ್ಟ ಗುಣಮಮಟ್ಟದ ಉಪಗ್ರಹ ಚಿತ್ರಗಳೊಂದಿಗೆ ಸುದ್ದಿ ಮಾಧ್ಯಮ ಎನ್‌ಡಿಟಿವಿ ಸೋಮವಾರ ವರದಿ ಪ್ರಕಟಿಸಿದೆ.
ಸಮುದ್ರದಲ್ಲಿ ಅತ್ಯಂತ ರಹಸ್ಯವಾಗಿ ಕಾರ್ಯಾಚರಿಸಬಲ್ಲ 'ಟೈಪ್ 039' ಡಿಸೇಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿಯೂ ಇದರಲ್ಲಿ ಸೇರಿದೆ ಎಂದು ವರದಿಯಲ್ಲಿ ಹೇಳಲಾಗಿದೆ.