ಬದಿಯಡ್ಕ: ರಾಜ್ಯದ ಎಲ್ಲ 152 ಬ್ಲಾಕ್ ಪಂಚಾಯಿತಿಗಳಲ್ಲಿ ಸಂಚಾರಿ ಪಶುವೈದ್ಯಕೀಯ ಘಟಕಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಅದಕ್ಕಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ ಪಶುಸಂಗೋಪನೆ, ಮೃಗಾಲಯ ಮತ್ತು ಹೈನುಗಾರಿಕೆ ಇಲಾಖೆ ಸಚಿವೆ ಜೆ.ಚಿಂಚುರಾಣಿ ತಿಳಿಸಿದರು.
ಬದಿಯಡ್ಕ ಗ್ರಾಮ ಪಂಚಾಯಿತಿಯಲ್ಲಿ ಪೂರ್ಣಗೊಂಡಿರುವ ಪಶು ವೈದ್ಯಕೀಯ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಸ್ತುತ ಎರಡು ಸಂಚಾರಿ ಪಶು ವೈದ್ಯಕೀಯ ಘಟಕಗಳಿವೆ. ಶೀಘ್ರದಲ್ಲೇ ಇತರ ಬ್ಲಾಕ್‍ಗಳಿಗೆ ಇಂತಹ ಘಟಕಗಳು ಲಭ್ಯವಿರುವ ವ್ಯವಸ್ಥೆ ಕಲ್ಪಿಸಲಾಗುವುದು. ಒಮ್ಮೆ ಈ ಯೋಜನೆ ಸಾಕಾರಗೊಂಡರೆ ದಿನದ 24 ಗಂಟೆಯೂ ಹೈನುಗಾರರ ಮನೆ ಬಾಗಿಲಿಗೆ ಪಶು ಚಿಕಿತ್ಸೆ ವ್ಯವಸ್ಥೆಯನ್ನು ತಲುಪಿಸಬಹುದು ಎಂದು ಸಚಿವರು ಹೇಳಿದರು. ರೈತರು ಪ್ರಾಣಿ ಕಲ್ಯಾಣಕ್ಕಾಗಿ ಕೇಂದ್ರೀಕೃತ ಟೋಲ್-ಫ್ರೀ ಸಂಖ್ಯೆ 1962 ಅನ್ನು ಸಂಪರ್ಕಿಸಬಹುದು ಮತ್ತು ತುರ್ತು ವೈದ್ಯಕೀಯ ನೆರವು ಪಡೆಯಬಹುದು. ಸಂಚಾರಿ ಪಶುವೈದ್ಯಕೀಯ ಘಟಕದಲ್ಲಿ ಪಶುವೈದ್ಯರು, ಪ್ಯಾರಾವೆಟರ್ನರಿ ಕಾರ್ಯಕರ್ತರು ಮತ್ತು ಚಾಲಕ-ಕಮ್-ಅಟೆಂಡೆಂಟ್ ಸೇವೆಗಳು ಲಭ್ಯವಿರುತ್ತವೆ ಎಂದರು.
. ಕಾರ್ಯಕ್ರಮದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿಯ ಉತ್ತಮ ಹೈನುಗಾರರಾದ ಮೊಯ್ತೀನ್‍ಕುಟ್ಟಿ, ತಾರಾ ನಾಗರಾಜ್ ನಾಯ್ಕ್, ಪಶು ವೈದ್ಯಾಧಿಕಾರಿ ಇ.ಚಂದ್ರಬಾಬು, ಸಿ.ಎಂ.ಅಬ್ದುಲಕುಂಞÂ್ಞ ಮೊದಲಾದವರನ್ನು ಸಚಿವರು ಸನ್ಮಾನಿಸಿದರು.
ಜಿಲ್ಲಾ ಪಶು ಕಲ್ಯಾಣಾಧಿಕಾರಿ ಡಾ.ಜಿ.ಜಯಪ್ರಕಾಶ್ ವರದಿ ಮಂಡಿಸಿದರು. ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಅಬ್ಬಾಸ್, ಬ್ಲಾಕ್ ಪಂಚಾಯಿತಿ ಸದಸ್ಯೆ ಕೆ.ಎಂ.ಅಶ್ವಿನಿ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಮ್ಯ ಮಹೇಶ್, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್ ರೈ, ಬದಿಯಡ್ಕ ಗ್ರಾ.ಪಂ.ಸದಸ್ಯ ಬಾಲಕೃಷ್ಣ ಶೆಟ್ಟಿ, ಬದಿಯಡ್ಕ ಗ್ರಾ.ಪಂ.ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಕೆ.ಜಗನ್ನಾಥ ಶೆಟ್ಟಿ, ಬಿ.ಸುಧಾಕರನ್, ಶ್ಯಾಮಪ್ರಸಾದ್, ಎ.ಟಿ.ವಿಜಯನ್, ಅನ್ವರ್ ಓಝೋನ್ ಮತ್ತು ಉದನೇಶ್ವರ ವೀರ ಮಾತನಾಡಿದರು. ಬದಿಯಡ್ಕ ಪಂಚಾಯಿತಿ ಅಧ್ಯಕ್ಷೆ ಬಿ.ಶಾಂತಾ ಸ್ವಾಗತಿಸಿ, ಬದಿಯಡ್ಕ ಪಶು ವೈದ್ಯಾಧಿಕಾರಿ ಡಾ.ಬಿ.ಅನುಗ್ರಹ ವಂದಿಸಿದರು.
ಸಾಕಾರಗೊಳ್ಳಲು 10 ವರ್ಷಗಳ ಕಾಯುವಿಕೆ:
ಪಶುವೈದ್ಯಕೀಯ ನೂತನ ಕಟ್ಟಡ ಉದ್ಘಾಟನೆಯೊಂದಿಗೆ ಬದಿಯಡ್ಕ ಪಂಚಾಯಿತಿ ಜನತೆಯ ಹತ್ತು ವರ್ಷಗಳ ಕಾಯುವಿಕೆ ಅಂತ್ಯಗೊಂಡಿದೆ. ಹಳೆಯ ಕಟ್ಟಡದ ದುಸ್ಥಿತಿಯಿಂದಾಗಿ 2014ರಿಂದ ಕ್ವಾರ್ಟರ್ಸ್‍ನಲ್ಲಿ ಔಷಧಾಲಯ ಕಾರ್ಯನಿರ್ವಹಿಸುತ್ತಿದೆ. ಲೋಕೋಪಯೋಗಿ ಇಲಾಖೆಯಿಂದ 65,50,000 ರೂ.ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನೂತನ ಕಟ್ಟಡ ನಿರ್ಮಿಸಲಾಗಿದೆ. ಆಪರೇಷನ್ ಥಿಯೇಟರ್, ಪ್ರಾಣಿ ಪರೀಕ್ಷಾ ವಿಭಾಗ, ಪ್ರಯೋಗಾಲಯ ಸೇವೆ, ಔಷಧಾಲಯ ಮತ್ತು ಮುಂಭಾಗದ ಕಚೇರಿಯನ್ನು(ಫ್ರಂಟ್ ಆಫೀಸ್) ಒದಗಿಸಲಾಗಿದೆ. ಪಶು ಆಸ್ಪತ್ರೆ 3.2 ಎಕರೆ ಜಮೀನು ಹೊಂದಿದೆ. ಪ್ರತಿದಿನ ಸರಾಸರಿ 50 ಪ್ರಾಣಿಗಳು ಆಸ್ಪತ್ರೆಯ ಸೇವೆಯನ್ನು ಪಡೆಯುತ್ತವೆ. ಚಿಕಿತ್ಸೆಯ ಹೊರತಾಗಿ, ಲಸಿಕೆ, ತಳಿ ವಿಸ್ತರಣೆ ಚಟುವಟಿಕೆಗಳಂತಹ ಸೇವೆಗಳು ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಲಭ್ಯವಿದೆ. 400ಕ್ಕೂ ಹೆಚ್ಚು ಜಾನುವಾರುಗಳು ಹಾಗೂ 10 ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಹೊಂದಿರುವ ಬದಿಯಡ್ಕ ಪಂಚಾಯಿತಿ ವಿಸ್ಕøತ ಪಶು ವೈದ್ಯಕೀಯ ಸೇವೆ ಅಗತ್ಯವಿರುವ ಪ್ರದೇಶವಾಗಿದೆ.