ಬದಿಯಡ್ಕ : ಗಡಿನಾಡ ಗಾನಕೋಗಿಲೆ ಕಲಾವಿದರ ವೇದಿಕೆ ಬದಿಯಡ್ಕ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ಕರೋಕೆ ಗಾಯನ ಸ್ಪರ್ಧೆ ಬದಿಯಡ್ಕದ ಸಂಸ್ಕೃತಿ ಭವನ ಸಭಾಂಗಣದಲ್ಲಿ ನಡೆಯಿತು.
ಹಿರಿಯ ಗಾಯಕ, ಸಂಘಟಕ ವಸಂತ ಬಾರಡ್ಕ ಅವರ ನೇತೃತ್ವದಲ್ಲಿ ನಡೆದ ಸಮಾರಂಭ ವಿಶಿಷ್ಟವಾಗಿ ಮೂಡಿಬಂತು. ಕರ್ನಾಟಕ ಸಿಂಹ ಘರ್ಜನೆ ವೇದಿಕೆ, ಭಾರತೀಯ ಸರ್ವ ಸಂಘಟನೆಗಳ ಒಕ್ಕೂಟ, ರಾಷ್ಟ್ರೀಯ ಮಾನವಹಕ್ಕುಗಳ ಜಾಗೃತಿ ಮತ್ತು ಭೃಷ್ಟಾಚಾರ ನಿರ್ಮೂಲನ ಸಂಸ್ಥೆ, ವಿಶ್ವಮಾನವ ಡಾ.ರಾಜ್ಕುಮಾರ್ ಜನಸೇವಾ ಫೌಂಡೇಶನ್ ಸಂಸ್ಥೆಗಳು ಸಹಭಾಗಿತ್ವ ನೀಡಿದ್ದುವು.
ಭಾರತೀಯ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ರಾಮಚಂದ್ರ ಹೂಡಿ ಚಿನ್ನಿ ಉದ್ಘಾಟಿಸಿದರು. ವಿಶ್ವಮಾನವ ಡಾ.ರಾಜ್ ಕುಮಾರ್ ಜನಸೇವಾ ಫೌಂಡೇಶನ್ ಅಧ್ಯಕ್ಷ ಆರ್.ಶಿವಕುಮಾರ್ ಗೌಡ ಮುಖ್ಯ ಅತಿಥಿಯಾಗಿದ್ದರು. ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಹಿರಿಯ ನ್ಯಾಯವಾದಿ,ಅಂಕಣಕಾರ ಥಾಮಸ್ ಡಿಸೋಜಾ, ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸಂಸ್ಥಾಪಕ ವಾಮನರಾವ್ ಬೇಕಲ್, ಕರ್ನಾಟಕ ಕಾರ್ಯನಿರತ ಕನ್ನಡಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ, ಪತ್ರಕರ್ತ ರವಿ ನಾಯ್ಕಾಪು, ಕುಂಬಡಾಜೆ ಗ್ರಾಮಪಂಚಾಯತ್ ಸದಸ್ಯ ಹರೀಶ್ ಗೋಸಾಡ, ಅಂಬೇಡ್ಕರ್ ವಿಚಾರ ವೇದಿಕೆಯ ಜಿಲ್ಲಾ ಸಮಿತಿ ಅಧ್ಯಕ್ಷ ರಾಮ ಪಟ್ಟಾಜೆ, ಕೋಲಾರದ ಸಾಹಿತಿಗಳಾದ ಹರಿನಾರಾಯಣ, ಬಾ.ಹಾ.ಶೇಖರಪ್ಪ, ನಾಗಮಂಗಲ ಎನ್.ಡಿ.ಕುಮಾರ್, ಸುರೇಶ್ ಬೆಂಗಳೂರು, ಬಿ.ಎಸ್.ಎಸ್. ಯುವ ಅಧ್ಯಕ್ಷ ಎ.ಬಿ.ವಿ.ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು. ನಾಸಿಕದಲ್ಲಿ ಶಹನಾಯ್ ವಾದನ ನಡೆಸುವ ಪಟು ಪ್ರೇಮ್ ಅವರಿಂದ ಮಿಮಿಕ್ರಿ ಸಹಿತ ಕಾರ್ಯಕ್ರಮಗಳು ನಡೆದುವು. ವಸಂತ ಬಾರಡ್ಕ ಸ್ವಾಗತಿಸಿದರು. ಪತ್ರಕರ್ತ ವೀಜಿ.ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ವೇಣುಗೋಪಾಲ ರೈ ಪುತ್ತಿಗೆ ವಂದಿಸಿದರು. ಬದಿಯಡ್ಕ ಪೇಟೆಯಲ್ಲಿ ರಾಜ್ಯೋತ್ಸವ ಮೆರವಣಿಗೆ ನಡೆಯಿತು. ನಾಸಿಕ್ ಬ್ಯಾಂಡ್ ಸಹಿತ ಕಲಾಪ್ರಕಾರಗಳು ಆಕರ್ಷಣೆ ಪಡೆದುವು.
ಕರೋಕೆ ಗಾಯನ ಸ್ಪರ್ಧೆಯಲ್ಲಿ ಹಿರಿಯ ಸಾಧಕ ಗಾಯಕರಾದ ವಾಷ್ಟರ್ ಭೀಮರಾವ್ ಸುಳ್ಯ ಮತ್ತು ಚಂದ್ರಶೇಖರ ಹೆಗ್ಡೆ ಪುತ್ತೂರು ತೀರ್ಪುಗಾರರಾಗಿದ್ದರು. ವಿವಿಧೆಡೆಗಳ ಸುಮಾರು 32 ಮಂದಿ ಪ್ರತಿಭಾನ್ವಿತರು ಸ್ಪರ್ಧಾಳುಗಳಾಗಿದ್ದರು. ವಿದ್ಯಾಲಕ್ಷ್ಮಿ ಮೈಲುತೊಟ್ಟಿ ಪ್ರಥಮ ಬಹುಮಾನಕ್ಕೆ ಭಾಜನರಾದರು. ಅನ್ವಿತಾ ಕಾಮತ್ ಕಾಸರಗೋಡು ದ್ವಿತೀಯ ಸ್ಥಾನ ಪಡೆದರು. ಅಶ್ವಿಜ್ ಆತ್ರೇಯ ಸುಳ್ಯ ತೃತೀಯ ಬಹುಮಾನ ಗಳಿಸಿದರು.
ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರಾದ ವಾಷ್ಟರ್ ಭೀಮರಾವ್ ಸುಳ್ಯ ಮತ್ತು ಚಂದ್ರಶೇಖರ ಹೆಗ್ಡೆ ಪುತ್ತೂರು, ಅಂಬೇಡ್ಕರ್ ವಿಚಾರವೇದಿಕೆಯ ಜಿಲ್ಲಾ ಸಮಿತಿ ಅಧ್ಯಕ್ಷ ರಾಮ ಪಟ್ಟಾಜೆ, ಕಲಾಪೋಷಕ ಸಂತೋಷ್ ಕಾರ್ಲೆ ಉಪಸ್ಥಿತರಿದ್ದರು.