ನವದೆಹಲಿ: ಹೆಚ್ಚುತ್ತಿರುವ ಹಣದುಬ್ಬರ ಮತ್ತು ನಿರುದ್ಯೋಗಕ್ಕೆ ನರೇಂದ್ರ ಮೋದಿ ಸರ್ಕಾರವೇ ಹೊಣೆ ಎಂದು ಕಾಂಗ್ರೆಸ್ ಆರೋಪಿಸಿದ್ದು ಛತ್ತೀಸ್‌ಗಢದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವಾರ್ಷಿಕ 15,000 ರೂಪಾಯಿಗಳ ಆರ್ಥಿಕ ನೆರವು ನೀಡುವ ಭರವಸೆಯು ಲಕ್ಷಾಂತರ ಕುಟುಂಬಗಳಿಗೆ ಪರಿಹಾರವನ್ನು ನೀಡುತ್ತದೆ ಎಂದು ಹೇಳಿದೆ.
ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರವನ್ನು ಉಳಿಸಿಕೊಂಡರೆ ಮಹಿಳೆಯರಿಗೆ ವಾರ್ಷಿಕ 15,000 ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಘೋಷಿಸಿದರು. ಬಘೇಲ್ ಅವರ ಘೋಷಣೆಯ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಇದು ಕಾಂಗ್ರೆಸ್‌ನ ಗ್ಯಾರಂಟಿ. ನಾವು ಭರವಸೆ ನೀಡುತ್ತೇವೆ. ನಾವು ಪ್ರಧಾನಿ ಮತ್ತು ಬಿಜೆಪಿಯಂತೆ 'ಜುಮ್ಲೇಬಾಜಿ'ಯಲ್ಲಿ ತೊಡಗುವುದಿಲ್ಲ ಎಂದು ಹೇಳಿದ್ದಾರೆ.
ಮೋದಿ ಸರ್ಕಾರದಿಂದ ಹಣದುಬ್ಬರ ಮತ್ತು ನಿರುದ್ಯೋಗ ಹೆಚ್ಚುತ್ತಿದೆ ಎಂದು ರಮೇಶ್ ಆರೋಪಿಸಿದರು. ಗೃಹ ಲಕ್ಷ್ಮೀ ಯೋಜನೆಯಿಂದ ಲಕ್ಷಾಂತರ ಕುಟುಂಬಗಳಿಗೆ ಪರಿಹಾರ ದೊರೆಯಲಿದೆ ಎಂದರು. ಛತ್ತೀಸ್‌ಗಢದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ, 'ಛತ್ತೀಸ್‌ಗಢ ಗೃಹ ಲಕ್ಷ್ಮಿ ಯೋಜನೆ' ಅಡಿಯಲ್ಲಿ ರಾಜ್ಯದ ಮಹಿಳೆಯರಿಗೆ ವಾರ್ಷಿಕ 15,000 ರೂಪಾಯಿಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ನೀಡಲಾಗುವುದು ಎಂದು ಬಾಘೇಲ್ ಹೇಳಿದರು.
ನವೆಂಬರ್ 17 ರಂದು ನಡೆಯಲಿರುವ ಛತ್ತೀಸ್‌ಗಢದ ಎರಡನೇ ಹಂತದ ಚುನಾವಣೆಗೆ ಮುಂಚಿತವಾಗಿ ಈ ಘೋಷಣೆಯನ್ನು ಮಾಡಲಾಗಿದ್ದು, ವಿವಾಹಿತ ಮಹಿಳೆಯರಿಗೆ ವರ್ಷಕ್ಕೆ 12,000 ರೂಪಾಯಿಗಳನ್ನು ನೀಡುವುದಾಗಿ ಪ್ರತಿಪಕ್ಷ ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಭರವಸೆಗೆ ಪ್ರತಿಕ್ರಿಯೆಯಾಗಿ ನೋಡಲಾಗುತ್ತಿದೆ.