ಕಾಸರಗೋಡು: ಜಿಲ್ಲೆಯ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರಿಗಾಗಿ ತಿರುವನಂತಪುರ ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ಶ್ರೀ ಸತ್ಯಸಾಯಿ ಅಭಯಾಶ್ರಮ ಟ್ರಸ್ಟ್ ಎಣ್ಮಕಜೆ ಪಂಚಾಯಿತಿಯ ಬಜಕೂಡ್ಲು ಕಾನ ಪ್ರದೇಶದಲ್ಲಿ ನಿರ್ಮಿಸಿಕೊಟ್ಟಿರುವ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವ ದಿನ ಸಮೀಪಿಸುತ್ತಿದೆ.
ಎಲ್ಲವೂ ಅಂದುಕೊಂಡಂತೆ ಕಾಮಗಾರಿ ನಡೆಯುತ್ತಿದ್ದಲ್ಲಿ 2019ರ ವೇಳೆಗೆ ಮನೆಗಳ ಹಸ್ತಾಂತರ ನಡೆಯಬೇಕಾಗಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಮನೆಕೆಲಸ ಪೂರ್ತಿಗೊಂಡರೂ, ಫಲನುಭವಿಗಳಿಗೆ ಹಸ್ತಾಂತರಿಸದ ಸ್ಥಿತಿ ಟ್ರಸ್ಟ್‍ಗೆ ಎದುರಾಗಿತ್ತು. ಮೂಲ ಸೌಕರ್ಯ ಒದಗಿಸಿಕೊಡಬೇಕಾದ ಸರ್ಕಾರ ಅನುಸರಿಸಿದ ವಿಳಂಬ ಧೋರಣೆಯಿಂದ ಮನೆಗಳ ಕೀಲಿಕೈ ಹಸ್ತಾಂತರವೂ ಸಾದ್ಯವಾಗಿಲ್ಲ. ಸರ್ಕಾರದ ನಿಲುವಿನ ವಿರುದ್ಧ ಟ್ರಸ್ಟ್ ನ್ಯಾಯಾಲಯದ ಮೆಟ್ಟಿಲೇರಬೇಕಾಗಿ ಬಂದಿತ್ತು. ಮನೆ ನಿರ್ಮಾಣಕ್ಕೆ ಜಾಗ, ರಸ್ತೆ ನಿರ್ಮಾಣ, ವಿದ್ಯುತ್, ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ಮೂಲ ಸೌಕರ್ಯವನ್ನು ಸರ್ಕಾರ ಒದಗಿಸಿಕೊಡುವ ಭರವಸೆಯೊಂದಿಗೆ ಯೋಜನೆ ಜಾರಿಯಾಗಿತ್ತು.
ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಿರ್ಮಿಸಿರುವ ಮನೆಗಳಿಗೆ ತೆರಳಲು ಸರ್ವಋತು ರಸ್ತೆ ಸೌಕರ್ಯವನ್ನು ಕಳೆದ ವರ್ಷವಷ್ಟೆ ಒದಗಿಸಲಾಗಿತ್ತು. ವಿದ್ಯುತ್, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದಿರುವ ಬಗ್ಗೆ ಟ್ರಸ್ಟ್ ನ್ಯಾಯಾಲಯದ ಮೊರೆಹೋಗಿತ್ತು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯ ನೀರು, ರಸ್ತೆ ಜತೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಉಚ್ಛ ನ್ಯಾಯಾಲಯ ಕಾಸರಗೋಡು ಜಿಲ್ಲಾಧಿಕಾರಿಗೆ ಆದೇಶ ನೀಡಿತ್ತು.
ಚುರುಕುಗೊಂಡ ಕಾಮಗಾರಿ:
ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ಎಂಡೋಸಲ್ಫಾನ್ ಸಂತ್ರಸ್ತರಿಗೆ ಮನೆಯ ಕೀಲಿಕೈ ಹಸ್ತಾಂತರ ಸಧ್ಯವಾಗಲೇ ಇಲ್ಲ. ಈ ಮಧ್ಯೆ ಮನೆಗಳ ಸುತ್ತು ಕಾಡು ಆವರಿಸಿ ಒಳಗೆ ತೆರಳಲಾಗದ ಸ್ಥಿತಿ ಒಂದೆಡೆಯಾದರೆ, ಮನೆ ನಿರ್ಮಾಣಗೊಂಡು ಐದು ವರ್ಷ ಸಮೀಪಿಸುತ್ತಿದ್ದಂತೆ ಮನೆಗಳಿಗೆ ಅಳವಡಿಸಿದ ಕಿಟಿಕಿ, ಬಾಗಿಲುಗಳೂ ಶಿಥಿಲಗೊಳ್ಳಲಾರಂಭಿಸಿತ್ತು. ವಿದ್ಯುತ್ ವಯರಿಂಗ್‍ಗಳೂ ಕಳಚಿಬೀಳುವ ಸ್ಥಿತಿ ನಿರ್ಮಾಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಾಯಿ ಟ್ರಸ್ಟ್‍ಗೆ ನ್ಯಾಯಾಲಯದ ಮೊರೆಹೋಗಬೇಕಾಗಿ ಬಂದಿತ್ತು. ಉಳಿದಿರುವ ಕಾಮಗಾರಿ ಶೀಘ್ರ ಪೂರ್ತಿಗೊಳಿಸುವುದರ ಜತೆಗೆ ಮುರಿದ ಕಿಟಿಕಿ,ಬಾಗಿಲು, ವಿದ್ಯುತ್ ವಯರಿಮಗ್‍ಗಳ ದುರಸ್ತಿಗೂ ನ್ಯಾಯಾಲಯ ಆದೇಶಿಸಿತ್ತು.
ಕಾಡು ಬೆಳೆದಿದ್ದ ಮನೆ ವಠಾರವನ್ನು ಎಣ್ಮಕಜೆ ಗ್ರಾಮ ಪಂಚಾಯಿತಿ ವತಿಯಿಂದ ಕುಟುಂಬಶ್ರೀ, ವಿವಿಧ ಇಲಾಖೆಗಳ ಸಿಬ್ಬಂದಿ ಸೇರಿದಂತೆ ಹಲವಾರು ಮಂದಿಯ ಶ್ರಮದಾನದ ಮೂಲಕ ಶುಚೀಕರಿಸಲಾಗಿತ್ತು. ಅಂದಿನ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಮಧ್ಯ ಪ್ರವೇಶದಿಂದ ರಸ್ತೆಗೆ ಡಾಂಬರೀಕರಣ, ವಿದ್ಯುತ್ ಕಂಬ ಅಳವಡಿಸಿ ತಂತಿ ಎಳೆಯುವ ಕಾರ್ಯ, ಗೋಳಿತ್ತಡ್ಕದಿಂದ ಕುಡಿಯುವ ನೀರಿನ ಪೈಪ್ ಅಳವಡಿಕೆ ಕಾರ್ಯ ನಡೆದಿತ್ತು. ಮೂಲ ಸೌಕರ್ಯ ಒದಗಿಸಿಕೊಟ್ಟು, ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸುವ ಬಗ್ಗೆ ಹೈಕೋರ್ಟು ನ್ಯಾಯಾಧೀಶ ಜಸ್ಟಿಸ್ ದೇವನ್ ರಾಮಚಂದ್ರನ್ ಆದೇಶ ನೀಡುತ್ತಿದ್ದಂತೆ ಕಾಮಗಾರಿ ಚುರುಕುಗೊಂಡಿದೆ. ಮನೆಗಳ ಹಸ್ತಾಂತರ ವಿಳಂಬದ ಬಗ್ಗೆ 'ವಿಜಯವಾಣಿ'ನಿರಂತರ ವಿಶೇಷ ವರದಿ ಮೂಲಕ ಜಿಲ್ಲಾಡಳಿತದ ಗಮನ ಸೆಳೆದಿತ್ತು.