ರಾಯ್ಪುರ: ದೇಶದಲ್ಲಿರುವ ಬಡತನ ಒಂದೇ ಏಕೈಕ ಜಾತಿ ಎಂದು ಕರೆಯುವ ಪ್ರಧಾನಿ ಮರೇಂದ್ರ ಮೋದಿ ತಮ್ಮನ್ನು ತಾವು ಹಿಂದುಳಿದ ವರ್ಗಗಳ (OBC) ಎಂದು ಏಕೆ ಗುರುತಿಸಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕರು ತಮ್ಮ ಭಾಷಣಗಳಲ್ಲಿ ವನವಾಸಿಎಂಬ ಪದ ಬಳಸುವ ಮೂಲಕ ಆದಿವಾಸಿಗಳನ್ನು ಅವಮಾನಿಸಿದೆ. ಆದಿವಾಸಿ ಹಾಗೂ ವನವಾಸಿ ಎಂಬ ಪದಗಳ ನಡುವೆ ಸಾಕಷ್‌ಉ ವ್ಯತ್ಯಾಸವಿದ್ದು, ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕನೋರ್ವ ಆದಿವಾಸಿ ಸಮುದಾಯಕ್ಕೆ ಸೇರಿದ ವ್ಯಕ್ತಿ ಮೇಲೆ ಮೂತ್ರ ವಿಸರ್ಜಿಸಿ ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ಇದು ಬಿಜೆಪಿ ಅವರ ಮನಸ್ಥಿತಿ ಹೇಗಿದೆ ಎಂಬುದು ಸ್ಪಷ್ಟವಾಗಿ ತೋರಿಸುತ್ತಿದೆ. ಆದಿವಾಸಿಗಳನ್ನು ಅವರು ಕಾಡುಪ್ರಾಣಿಗಳಿಗಿಂತ ಕೀಳಾಗಿ ನೋಡುತ್ತಾರೆ.
ಆದಿವಾಸಿ ಎಂಬುದು ಕ್ರಾಂತಿಕಾರಿ ಪದವಾಗಿದ್ದು, ಈ ದೇಶದ ಮೂಲ ವಾಸಿಗಳು ಎಂದರ್ಥ. ಬಿಜೆಪಿಯವರು ಆದಿವಾಸಿ ಎಂಬ ಪದವನ್ನು ಯಾವುದೇ ಕಾರಣಕ್ಕೂ ಬಳಸುವುದಿಲ್ಲ ಏಕೆಂದರೆ ಒಂದು ವೇಳೆ ಅವರು ಹಾಗೆ ಮಾಡಿದರೆ ಇಲ್ಲಿನ ಭೂಮಿ ಹಾಗೂ ಅರಣ್ಯವನ್ನು ಹಿಂತಿರುಗಿಸಬೇಕಾಗುತ್ತದೆ. ವನವಾಸಿ ಎಂಬ ಪದವು ಆದಿವಾಸಿಗಳಿಗೆ ಮಾಡಿರುವ ಅವಮಾನವಾಗಿದ್ದು, ಇದನ್ನು ಕಾಂಗ್ರೆಸ್ ಸಹಿಸುವ ಮಾತಿಲ್ಲ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ತಮ್ಮ ಭಾಷಣಗಳಲ್ಲಿ ಆದಿವಾಸಿ ಎಂಬ ಪದವನ್ನು ಹೆಚ್ಚಾಗಿ ಬಳಸಿದ್ದರು. ಇನ್ನು ಮುಂದೆ ಅವರು ಹಾಗೆ ಮಾಡುವುದಿಲ್ಲ ಏಕೆಂದರೆ ಅವರು ತಮ್ಮ ಭಾಷಣ ಮಾಡುವ ವೇಳೆ ಮಾತನಾಡುವ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ. ಆದರೆ, ಅವರ ಆಲೋಚನೆಗಳನ್ನು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 90 ಸದಸ್ಯಬಲದ ಛತ್ತೀಸ್ಗಢ ವಿಧಾನಸಭೆಗೆ ನವೆಂಬರ್ 07 ಹಾಗೂ 17ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.