ಕಾಸರಗೋಡು: ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಡಿಜಿ ಲಾಕರ್ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ. ಇನ್‍ಬಾಶೇಖರ್ ನಿರ್ದೇಶ ನೀಡಿದ್ದಾರೆ. ಈ ಮೂಲಕ ಸರ್ಕಾರಿ ಕಡತಗಳು, ಪ್ರಮುಖ ದಾಖಲೆಗಳನ್ನು ಸಂರಕ್ಷಿಸಿಟ್ಟುಕೊಳ್ಳಲು ಸಾಧ್ಯವಾಗಲಿದೆ. ಇವುಗಳನ್ನು ಡಿಜಿ ಲಾಕರ್‍ಗೆ ಲಿಂಕ್ ಮಾಡಿಕೊಳ್ಳುವುದರಿಂದ ಈ ದಾಖಲೆಗಳಿಗೆ ಮತ್ತಷ್ಟು ಸಂರಕ್ಷಣೆ ಲಭಿಸಲಿದೆ.
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್‍ಗಳು ಮತ್ತು ಇತರ ಪ್ರಮಾಣಪತ್ರಗಳಂತಹ ಪ್ರಮುಖ ದಾಖಲೆಗಳನ್ನು ಡಿಜಿ ಲಾಕರ್ ಎಂಬ ಆನ್‍ಲೈನ್ ಡಾಕ್ಯುಮೆಂಟ್ ಸಂಗ್ರಹಣೆ ಮತ್ತು ಹಂಚಿಕೆ ವೇದಿಕೆ ಮೂಲಕ ಸಂರಕ್ಷಿಸಿಟ್ಟುಕೊಳ್ಳಬಹುದಾಗಿದೆ. ಇದು ವ್ಯಕ್ತಿಗಳಿಗೆ ಡಿಜಿಟಲ್ ಸ್ವರೂಪದಲ್ಲಿ ದಾಖಲೆಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ತಮ್ಮ ಡಾಕ್ಯುಮೆಂಟ್‍ಗಳನ್ನು ಆನ್‍ಲೈನ್‍ನಲ್ಲಿ ಪ್ರವೇಶಿಸಲು ಮತ್ತು ನಿರ್ವಹಿಸಲು ಸಾಧ್ಯವಾಗಲಿದೆ. ಜಿಲ್ಲೆಯಲ್ಲಿ ಸಂಪೂರ್ಣ ಡಿಜಿಟಲ್ ರೂಪಾಂತರವನ್ನು ಜಾರಿಗೆ ತರಲು ಜಿಲ್ಲಾಡಳಿತವು ರೂಪಿಸಿರುವ ಯೋಜನೆಯಾದ 'ಕನೆಕ್ಟಿಂಗ್ ಕಾಸರಗೋಡು'ಅಂಗವಾಗಿ ಜಾರಿಗೆ ತಂದಿರುವ ಡಿಜಿಲಾಕರ್ ವ್ಯವಸ್ಥೆಯ ಮೊದಲ ಹಂತದಲ್ಲಿ ಎಲ್ಲಾ ನೌಕರರು ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.