ಕಾಸರಗೋಡು: ಮಹಿಳೆಯರು ಜಾಗೃತಗೊಳ್ಳುವುದರಿಂದ ನಿಜವಾದ ಮಹಿಳಾ ಸಬಲೀಕರಣ ನಡೆಯಲು ಸಾಧ್ಯ ಎಂದು ನಿವೃತ್ತ ಜಿಲ್ಲಾಧಿಕಾರಿ ಡಾ.ಪಿ.ಕೆ.ಜಯಶ್ರೀ ಐಎಎಸ್ ತಿಳಿಸಿದ್ದಾರೆ.
ಅವರು ಮಹಿಳಾ ಸಂಘ ವೇದಿ ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ನಗರಸಭಾಂಗಣದಲ್ಲಿ ಸ್ತ್ರೀ ಶಕ್ತಿ ಸಂಗಮದ ಅಂಗವಾಗಿ ಆಯೋಜಿಸಲಾಗಿದ್ದ ಮಹಿಳಾ ವಿಚಾರ ಸಂಕಿರಣ ಹಾಗೂ ಸ್ವಾಗತ ಸಮಿತಿ ರಚನಾ ಸಭೆ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಮಹಿಳೆ ತನ್ನನ್ನು ಮತ್ತು ತನ್ನ ಕುಟುಂಬವನ್ನು ಸಬಲಗೊಳಿಸುವಲ್ಲಿ ನಿರಂತರ ಶ್ರಮ ವಹಿಸುತ್ತಾಳೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಶೇ.33 ಮೀಸಲಾತಿಯು ಮಹಿಳಾ ಸ್ವಾತಂತ್ರ್ಯಕ್ಕಾಗಿ ನಡೆಸಿದ್ದ ಮೌನ ಹೋರಾಟಕ್ಕೆ ಸಂದ ಗೆಲುವಾಗಿದೆ ಎಂದು ತಿಳಿಸಿದರು.
ಡಾ.ನಾಗರತ್ನಾ ಪೆರಿಯ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಚಿನ್ಮಯ ಮಿಷನ್‍ನ ಬ್ರಹ್ಮಚಾರಿಣಿ ರೋಜಿಶಾ, ಪೆರಿಯಾ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಲಕ್ಷ್ಮಿ, ಡಾ.ಸಂಗೀತಾ ಸಚ್ಚಿದಾನಂದ ವಿವಿಧ ವಿಷಯಗಳ ಕುರಿತು ಮಾತನಾಡಿದರು. ರಾಜ್ಯ ಗೋ ಸೇವಾ ಸಂಯೋಜಕ ಕೆ.ಕೃಷ್ಣನ್‍ಕುಟ್ಟಿ, ಮಹಿಳಾ ಸಂಘವೇದಿ ರಾಜ್ಯ ಸಂಯೋಜಕ ಎಂ.ಆರ್.ಪ್ರಸಾದ್, ಜಿಲ್ಲಾ ಸಂಯೋಜಕ ವಕೀಲ ಕೆ.ಕರುಣಾಕರನ್, ಜಿಲ್ಲಾ ಸಂಯೋಜಕಿ ಸರಿತಾ ದಿನೇಶ್ ಉಪಸ್ಥಿತರಿದ್ದರು. ಮಹಿಳಾ ಶಕ್ತ ಸಂಗಮದ ಯಶಸ್ಸಿಗೆ ಡಾ.ನಾಗರತ್ನ ಪೆರಿಯ ಅಧ್ಯಕ್ಷೆ, ಗೀತಾ ಬಾಬುರಾಜ್ ಪ್ರಧಾನ ಸಂಚಾಲಕಿಯಾಗಿರುವ 501 ಸದಸ್ಯರ ಸಮಿತಿ ರಚಿಸಲಾಯಿತು.