ಕೋಯಿಕ್ಕೋಡ್: ಮಾವೋವಾದಿಗಳ ವಿರುದ್ಧದ ಸರ್ಕಾರ ಮತ್ತು ಪೊಲೀಸರ ಕಾರ್ಯಾಚರಣೆಯನ್ನು ನಿಲ್ಲಿಸದಿದ್ದರೆ 'ಫೇಕ್ ಕಾಮ್ರೆಡ್ಸ್ ಹಮಾಸ್ ರ್‍ಯಾಲಿ'ಯನ್ನು ಸ್ಫೋಟಿಸುವುದಾಗಿ ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಮಾವೋವಾದಿ) ಕೋಯಿಕ್ಕೋಡ್ ಜಿಲ್ಲಾಧಿಕಾರಿಗೆ ಪತ್ರವೊಂದನ್ನು ಕಳುಹಿಸಿದೆ.
ಕೋಯಿಕ್ಕೋಡ್ ಜಿಲ್ಲೆಯ ಅಗತ್ಯತೆಗಳನ್ನು ಪೂರೈಸುವುದನ್ನು ಬಿಟ್ಟು ಸರ್ಕಾರವು ವಿದೇಶಿ ಭಯೋತ್ಪಾದಕರಿಗಾಗಿ ರ್‍ಯಾಲಿಯನ್ನು ಆಯೋಜಿಸುತ್ತಿದೆ ಎಂದು ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಬುಧವಾರ ಸಂಜೆ ಡಿಸಿ ಕಚೇರಿಗೆ ಪತ್ರ ತಲುಪಿದ್ದು, ಅದನ್ನು ಪೊಲೀಸರಿಗೆ ರವಾನಿಸಲಾಗಿದೆ. ಮಾವೋವಾದಿಗಳನ್ನು ಅನ್ಯಾಯವಾಗಿ ಗುರಿಯಾಗಿಸಿಕೊಳ್ಳಲಾಗಿದ್ದು, ಸುಳ್ಳು ಮೊಕದ್ದಮೆ ದಾಖಲಿಸಲಾಗುತ್ತಿದೆ ಎಂದು ಪತ್ರದಲ್ಲಿ ಆಕ್ರೋಶ ಕೇಳಿಬಂದಿದೆ.
ಅನ್ಯಾಯವಾಗಿ ನಮ್ಮನ್ನು ಗುರಿಯಾಗಿಸಿಕೊಳ್ಳುವುದು ಮತ್ತು ನಮ್ಮ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವುದನ್ನು ಸರ್ಕಾರ ನಿಲ್ಲಿಸದಿದ್ದರೆ ಕೊಚ್ಚಿಯ ಪ್ರಾರ್ಥನಾ ಮಂದಿರದಲ್ಲಿ ಆಗಿದ್ದೇ ಹಮಾಸ್ ರ್‍ಯಾಲಿ ಸಂದರ್ಭ ಆಗುತ್ತದೆ ಎಂದು ಮಾವೋವಾದಿಗಳು ಎಚ್ಚರಿಕೆ ನೀಡಿದ್ದಾರೆ.
ಪತ್ರದ ಬಗ್ಗೆ ಮಾಹಿತಿ ನೀಡಿದ ನಡಕ್ಕಾವ್ ಪೊಲೀಸ್ ಠಾಣೆ ಠಾಣಾಧಿಕಾರಿ, ಮಾವೋವಾದಿಗಳ ವಿರುದ್ಧ ಪ್ರಕರಣ ದಾಖಲಿಸುವುದಾಗಿಯೂ ಹೇಳಿದ್ಧಾರೆ.
ಇತ್ತೀಚೆಗೆ, ಕೇರಳದ ಕಣ್ಣೂರು ಮತ್ತು ವಯನಾಡು ಜಿಲ್ಲೆಗಳಲ್ಲಿ ಮಾವೋವಾದಿಗಳ ಮೇಲೆ ಪೊಲೀಸ್ ವಿಶೇಷ ತಂಡಗಳ ದಾಳಿ ಬೆನ್ನಲ್ಲೇ ಈ ಪತ್ರ ಬಂದಿದೆ.
ಕಣ್ಣೂರಿನಲ್ಲಿ ವಾರದಲ್ಲಿ ಎರಡು ಬಾರಿ ನಕ್ಸಲರು ಮತ್ತು ಪೊಲೀಸ್ ನಡುವೆ ಗುಂಡಿನ ಚಕಮಕಿ ನಡೆದಿದೆ.