ಉಪ್ಪಳ: ಕಳೆದ ಏಳೂವರೆ ವರ್ಷಗಳಿಂದ ಕೇರಳದ ಜನತೆಯನ್ನು ಯಾವುದೇ ಅನಾಹುತಕ್ಕೆ ಎಡೆಮಾಡದೆ ಹೊಸ ಬದುಕು ಮುನ್ನಡೆಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ರಾಜ್ಯ ಕಂದಾಯ, ವಸತಿ ಇಲಾಖೆ ಸಚಿವ ಕೆ. ರಾಜನ್ ಹೇಳಿದರು.
ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶನಿವಾರ ಅಪರಾಹ್ನ ನಡೆದ ನವಕೇರಳ ಸಮಾವೇಶದ ರಾಜ್ಯಮಟ್ಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.
ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಯೇ ಸರ್ಕಾರದ ನೀತಿಯಾಗಿದೆ. ಇದಕ್ಕಾಗಿ ಸರ್ಕಾರ ಬಹು ಆಯಾಮದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಮಧ್ಯೆ ವಿವಾದಗಳನ್ನು ಕೇಳಲು ಸಮಯವಿಲ್ಲ. ನೀತಿ ಆಯೋಗ್‍ನ ಬಹು ಆಯಾಮದ ಬಡತನ ಸೂಚ್ಯಂಕದಲ್ಲಿ ಕೇರಳವು ಅತ್ಯಂತ ಕಡಿಮೆ ಬಡತನ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆÉ. ನವೆಂಬರ್ 1, 2025 ರ ವೇಳೆಗೆ, ಕೇರಳವು ಅತಿ ಬಡ ಕುಟುಂಬವೂ ಇಲ್ಲದ, ಬಡತನ ಮುಕ್ತ ರಾಜ್ಯವಾಗಲಿದೆ. ಕಳೆದ ಏಳು ವರ್ಷಗಳಲ್ಲಿ ಸುಮಾರು ಮೂರು ಲಕ್ಷ ಜನರಿಗೆ ಭೂ ದಾಖಲೆ ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ. ಇಡೀ ಕ್ಯಾಬಿನೆಟ್ ಜನರ ಮಾತು ಕೇಳಲು ಬರುವ ನವಕೇರಳ ಸಮಾವೇಶ ರಾಜ್ಯದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಲಿದೆ. ಕೇಂದ್ರ ಸರ್ಕಾರ ವಿವಿಧ ಮಾರ್ಗಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ತಡೆಯೊಡ್ಡಲು ಯತ್ನಿಸುತ್ತಿದ್ದರೂ ಕೇರಳ ಪ್ರಗತಿಯಲ್ಲಿದೆ ಎಂದು ಸಚಿವರು ಹೇಳಿದರು.
ಎಲ್ಲ ವರ್ಗದ ಜನರಿಗೂ ತಾರಮ್ಯ ರಹಿತ ಅಭಿವೃದ್ಧಿ ಅನುಭವ ನೀಡುವುದು ಸರ್ಕಾರದ ಅಭಿವೃದ್ಧಿ ನೀತಿಯಾಗಿದೆ ಎಂದು ಬಂದರು, ವಸ್ತು ಸಂಗ್ರಹಾಲಯ ಮತ್ತು ಪುರಾತತ್ವ ಸಚಿವ ಅಹಮದ್ ದೇವರಕೋವಿಲ್ ಹೇಳಿದರು. ಜನರನ್ನು ತಲುಪುವ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಜನರನ್ನು ಹೆಚ್ಚು ತೊಡಗಿಸಿಕೊಳ್ಳುವ ಚಟುವಟಿಕೆಗಳನ್ನು ಸರ್ಕಾರ ಜಾರಿಗೊಳಿಸುತ್ತಿದೆ. ಇದರ ಅಂಗವಾಗಿ ನವಕೇರಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ನವಕೇರಳ ಸಮಾವೇಶದೊಂದಿಗೆ ರಾಜ್ಯದಲ್ಲಿ ಹೊಸ ಸಂಸ್ಕøತಿ ಆರಂಭವಾಗುತ್ತಿದೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ರೋಶಿ ಆಗಸ್ಟಿನ್ ಹೇಳಿದರು. ವಿವಾದಗಳಿಗೆ ಕಿವಿಗೊಡದೆ ಸರ್ಕಾರ ಜನಪರ ಯೋಜನೆಗಳ: ಮೂಲಕ ಜನರನ್ನು ತಲುಪುತ್ತಿದೆ. ನವ ಕೇರಳ ಸಮಾವೇಶಕ್ಕೆ ಸಂಬಂಧಿಸಿದ ವಿವಾದಗಳು ಕೇವಲ ರಾಜಕೀಯ ಪ್ರೇರಿತವಾಗಿವೆ ಎಂದು ಸಚಿವರು ಹೇಳಿದರು.
ರಾಜ್ಯ ಅರಣ್ಯ ಮತ್ತು ವನ್ಯಜೀವಿ ಇಲಾಖೆ ಸಚಿವ ಎ.ಕೆ.ಶಶೀಂದ್ರನ್ ಮಾತನಾಡಿ, ಕಳೆದ ಏಳು ವರ್ಷಗಳಲ್ಲಿ ರಾಜ್ಯವು ಎಲ್ಲಾ ಕ್ಷೇತ್ರಗಳಲ್ಲಿ ಅದ್ಭುತ ಬೆಳವಣಿಗೆಯನ್ನು ಕಂಡಿದೆ. ನವ ಕೇರಳ ಸಮಾವೇಶ ರಾಜ್ಯದಲ್ಲಿ ಹೊಸ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ನಾಂದಿಯಾಗಿದೆ ಎಂದರು. ಉತ್ತರ ಮಲಬಾರಿನಲ್ಲಿ ವಿದ್ಯುತ್ ವಲಯದ ವೋಲ್ಟೇಜ್ ಕೊರತೆ ಹಾಗೂ ಪದೇ ಪದೇ ಆಗುತ್ತಿರುವ ವಿದ್ಯುತ್ ವ್ಯತ್ಯಯವನ್ನು ಶೀಘ್ರವೇ ಪರಿಹರಿಸಲಾಗುವುದು ಎಂದು ರಾಜ್ಯ ವಿದ್ಯುತ್ ಸಚಿವ ಕೆ. ಕೃಷ್ಣ ಹೇಳಿದರು. ಇದರ ಭಾಗವಾಗಿ ಕಾಸರಗೋಡು ಕೇಂದ್ರೀಕರಿಸಿ 105 ಮೆಗಾವ್ಯಾಟ್ ಸೌರ ವಿದ್ಯುತ್ ಪಾರ್ಕ್ ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ ಹಂತವಾಗಿ 100 ಮೆಗಾವ್ಯಾಟ್ ಸೌರ ವಿದ್ಯುತ್ ಪಾರ್ಕ್ ಸ್ಥಾಪಿಸುವುದಾಗಿ ಸಚಿವರು ಹೇಳಿದರು. ಕಾಸರಗೋಡು ಜಿಲ್ಲೆಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಕ್ರಾಂತಿ ಸೃಷ್ಟಿಸಲು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ನವ ಕೇರಳ ಸಮಾವೇಶ ಹೊಸ ಸಂಸ್ಕೃತಿ ಮತ್ತು ರಾಜ್ಯದ ಅಭಿವೃದ್ಧಿಗೆ ಹೊಸ ಮುಖವನ್ನು ನೀಡುವ ಪ್ರಯಾಣವಾಗಿದೆ ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿದರು. ಜನರ ಬೆಂಬಲದಿಂದ ರಾಜ್ಯದ ಅಭಿವೃದ್ಧಿ ಮುಂದುವರಿಯಲಿದೆ ಎಂದು ಸಚಿವರು ಹೇಳಿದರು.