ನವದೆಹಲಿ: ಔಷಧಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುವುದಕ್ಕೆ ನೀತಿಯೊಂದನ್ನು ರೂಪಿಸಲು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಎಂಟು ವಾರಗಳ ಅಂತಿಮ ಅವಕಾಶ ನೀಡಿದೆ. ನೀತಿ ರೂಪಿಸುವ ಪ್ರಕ್ರಿಯೆಗೆ ಕೇಂದ್ರವು ವೇಗ ನೀಡಬೇಕು ಎಂದು ಹೇಳಿದೆ.
ನವದೆಹಲಿ: ಔಷಧಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುವುದಕ್ಕೆ ನೀತಿಯೊಂದನ್ನು ರೂಪಿಸಲು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಎಂಟು ವಾರಗಳ ಅಂತಿಮ ಅವಕಾಶ ನೀಡಿದೆ. ನೀತಿ ರೂಪಿಸುವ ಪ್ರಕ್ರಿಯೆಗೆ ಕೇಂದ್ರವು ವೇಗ ನೀಡಬೇಕು ಎಂದು ಹೇಳಿದೆ.
ನೀತಿಯನ್ನು ರೂಪಿಸಲು ಎಂಟು ವಾರಗಳಲ್ಲಿ ಸಾಧ್ಯವಾಗದಿದ್ದರೆ, ಈ ವಿಷಯಕ್ಕೆ ಸಂಬಂಧಿಸಿದ ಜಂಟಿ ಕಾರ್ಯದರ್ಶಿಯು ಮುಂದಿನ ವಿಚಾರಣೆ ಸಂದರ್ಭದಲ್ಲಿ ಖುದ್ದಾಗಿ ಹಾಜರಿರಬೇಕು ಎಂದು ಹೈಕೋರ್ಟ್ ಹೇಳಿದೆ.
'ಐದು ವರ್ಷಗಳಿಗಿಂತ ಹೆಚ್ಚು ಕಾಲ ಸಂದಿದೆ. ಕೇಂದ್ರ ಸರ್ಕಾರಕ್ಕೆ ನೀತಿಯನ್ನು ರೂಪಿಸಲು ಅಗತ್ಯ ಕಾಲಾವಕಾಶ ಇತ್ತು. ನೀತಿಯನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಕಡೆಯ ಒಂದು ಅವಕಾಶವನ್ನು ನೀಡಲಾಗುತ್ತಿದೆ' ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರಿದ್ದ ನ್ಯಾಯಪೀಠ ಹೇಳಿದೆ.
ಔಷಧಗಳನ್ನು ಆನ್‌ಲೈನ್ ಮೂಲಕ ಅಕ್ರಮವಾಗಿ ಮಾರಾಟ ಮಾಡುತ್ತಿರುವುದನ್ನು ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ವಸ್ತುಸ್ಥಿತಿ ವರದಿಯನ್ನು ಸಲ್ಲಿಸುವಂತೆ ಕೋರ್ಟ್ ಈ ಹಿಂದೆ ಕೇಂದ್ರಕ್ಕೆ ಸೂಚಿಸಿತ್ತು.
ಹೈಕೋರ್ಟ್ ತಡೆಯಾಜ್ಞೆ ಇದ್ದರೂ ಔಷಧಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುತ್ತಿರುವ ಇ-ಫಾರ್ಮಸಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕಾನೂನಿನ ಅಡಿಯಲ್ಲಿ ಕ್ರಮ ಜರುಗಿಸಬೇಕು ಎಂದು ಅರ್ಜಿದಾರ ಜಹೀರ್ ಅಹ್ಮದ್ ಅವರು ಕೋರಿದ್ದಾರೆ. ಜಹೀರ್ ಅಹ್ಮದ್ ಅವರು ಈಚೆಗೆ ಮೃತಪಟ್ಟಿದ್ದಾರೆ ಎಂದು ಅವರ ವಕೀಲರು ಕೋರ್ಟ್‌ಗೆ ತಿಳಿಸಿದ್ದಾರೆ.
ಆನ್‌ಲೈನ್ ಮೂಲಕ ಔಷಧಗಳನ್ನು ಅಕ್ರಮವಾಗಿ ಮಾರಾಟ ಮಾಡುವುದು ಮುಂದುವರಿದಿದೆ ಎಂದು ಇನ್ನೊಬ್ಬರು ಅರ್ಜಿದಾರರ ಪರ ವಕೀಲರು ಪೀಠಕ್ಕೆ ತಿಳಿಸಿದರು. ಪರವಾನಗಿ ಇಲ್ಲದ ಇ-ಫಾರ್ಮಸಿಗಳು ಔಷಧಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುವುದಕ್ಕೆ ಹೈಕೋರ್ಟ್ 2018ರ ಡಿಸೆಂಬರ್ 12ರಂದು ತಡೆ ನೀಡಿದೆ.