ಹೈದರಾಬಾದ್: ಬೇರೆಯವರತ್ತ ಬೊಟ್ಟುಮಾಡುವ ಮುನ್ನ ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಿಕೊಳ್ಳಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.
ಹೈದರಾಬಾದ್‌ನ ನಾಂಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಮಾಜಿದ್ ಹುಸೇನ್ ಪರ ಇಂದು (ಶನಿವಾರ) ಮನೆ ಮನೆಗೆ ಪ್ರಚಾರ ನಡೆಸುತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ.
'ರಾಹುಲ್ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ 540 ಲೋಕಸಭಾ ಸ್ಥಾನಗಳಲ್ಲಿ ಸ್ಫರ್ಧಿಸಿತ್ತು. ಜತೆಗೆ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ 50ಕ್ಕೂ ಕಡಿಮೆ ಸ್ಥಾನಗಳನ್ನು ಗೆದ್ದಿತ್ತು. ಆಗ ಪ್ರಧಾನಿ ಮೋದಿ ಅವರ ಬಳಿ ನೀವು (ರಾಹುಲ್) ಎಷ್ಟು ಹಣವನ್ನು ತೆಗೆದುಕೊಂಡಿದ್ದೀರಿ ಎಂದು ಯಾರಾದರೂ ಪ್ರಶ್ನಿಸಿದ್ದಾರೆಯೇ ಎಂದು ಕಿಡಿಕಾರಿದ ಅವರು, ಮೊದಲು ನೀವು (ರಾಹುಲ್) ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಿಕೊಳ್ಳಿ. ಬಳಿಕ ಬೇರೆಯವರತ್ತ ಬೊಟ್ಟುಮಾಡಿ' ಎಂದು ಟೀಕಿಸಿದ್ದಾರೆ.
'ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಕೈವಾಡ ಹೊಂದಿರುವ ಶಿವಸೇನೆ (ಮಹಾರಾಷ್ಟ್ರ) ಜೊತೆ ಕಾಂಗ್ರೆಸ್ಸಿಗರು ಮೈತ್ರಿ ಮಾಡಿಕೊಂಡಿದ್ದಾರೆ. ಎಐಎಂಐಎಂ ಅಲ್ಪಸಂಖ್ಯಾತರ ಮತ್ತು ಬಡವರ ಧ್ವನಿಯಾಗಿ ಹೊರಹೊಮ್ಮಿದ್ದರಿಂದ ಇದೀಗ ಅವರು ಆತಂಕಗೊಂಡಿದ್ದಾರೆ. ನಾವು ಕಾಂಗ್ರೆಸ್ಸಿಗರ ವಿರುದ್ಧ ನಿರಂತರವಾಗಿ ಹೋರಾಡುತ್ತೇವೆ' ಎಂದು ಓವೈಸಿ ತಿಳಿಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆ ಕುರಿತು ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್ ಭರವಸೆಗಳ ಪಟ್ಟಿ ಕೇವಲ 'ಕಾಗದದ ಮೇಲೆ ಶಾಯಿ' ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಮೇತರರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದರೆ, ಮುಸ್ಲಿಂ ಮಹಿಳೆಯರಿಗಾಗಿ ಏನನ್ನೂ ಘೋಷಿಸಿಲ್ಲ. ಇದು ಅವರ ಮನಸ್ಥಿತಿಯನ್ನು ಬಿಂಬಿಸುತ್ತದೆ. ಛತ್ತೀಸಗಢ ಮತ್ತು ಮಧ್ಯಪ್ರದೇಶದಲ್ಲಿ ಮತದಾನ ಈಚೆಗೆ ಮುಕ್ತಾಯಗೊಂಡಿದೆ. ಈ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿರಲಿಲ್ಲ. ಆದರೆ, ತೆಲಂಗಾಣದಲ್ಲಿ ನಮ್ಮ ಪಕ್ಷ (ಎಐಎಂಐಎಂ) ಬಲವಾದ ನೆಲೆಯನ್ನು ಹೊಂದಿದೆ ಎಂದು ಕಾಂಗ್ರೆಸ್ಸಿಗರಿಗೆ ತಿಳಿದಿದೆ ಎಂದು ಓವೈಸಿ ಕುಟುಕಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಪ್ರೀತಿಯ ಅಂಗಡಿ ತೆರೆಯಲಿದೆ (ಮೊಹಬ್ಬತ್ ಕಿ ದುಕಾನ್) ಎಂಬ ರಾಹುಲ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಓವೈಸಿ, ರಾಹುಲ್ ಪ್ರತಿನಿಧಿಸುವುದು ಪ್ರೀತಿಯಲ್ಲ, ದ್ವೇಷವನ್ನು ಎಂದು ತಿರುಗೇಟು ನೀಡಿದ್ದಾರೆ.