ಕಾಸರಗೋಡು: ಜಿಲ್ಲೆಯಲ್ಲಿ ನವಕೇರಳ ಸಮಾವೇಶ ನಡೆಯಲಿರುವ ನ. 19ರ ಸರ್ಕಾರಿ ರಜೆಯನ್ನು ರದ್ದುಪಡಿಸಿ ಸರ್ಕಾರಿ ನೌಕರರೆಲ್ಲರನ್ನೂ ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದ ಹಿಂದೆ ಕಾರ್ಯಕ್ರಮ ವಿಫಲವಾಗುವ ಆತಂಕ ಅಡಕವಾಗಿರುವುದಾಗಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ತಿಳಿಸಿದ್ದಾರೆ.
ಕೇರಳ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕಾಲಘಟ್ಟದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ಮೊಂಡುಸಾಹಸ ಜನಸಾಮಾನ್ಯರಿಗೆ ಕಂಟಕವಾಗಿ ಪರಿಣಮಿಸಲಿದೆ. ಸಾಮಾಜಿಕ ಭದ್ರತೆಯ ಪಿಂಚಣಿ ಹೆಸರಿನಲ್ಲಿಸೆಸ್ ಸಂಗ್ರಹಿಸಿದರೂ ಪಿಂಚಣಿ ವಿತರಿಸದೆ ಜನರನ್ನು ವಂಚಿಸಲಾಗಿದೆ. ಎಡ ಸರ್ಕಾರದ ವಿರುದ್ಧ ಜನಾಂದೋಲನ ಪ್ರಬಲವಾಗಿರುವುದರಿಂದ ನವ ಕೇರಳ ಸಮಾವೇಶ ವಿಫಲವಾಗುವುದು ನಿಶ್ಚಿತ ಎಂಬುದು ಸ್ವತಃ ಮುಖ್ಯಮಂತ್ರಿಗೆ ಮನವರಿಕೆಯಾಗಿದೆ. ಇದನ್ನು ಹೋಗಲಾಡಿಸಲು ಸರ್ಕಾರಿ ನೌಕರರನ್ನು ಒತ್ತಾಯಪೂರ್ವಕವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿ, ಕಾರ್ಯಕ್ರಮ ಯಶಸ್ಸುಗೊಳಿಸಲು ಶತಾಯಗತಾಯ ಪ್ರಯತ್ನ ನಡೆಸಲಾಗುತ್ತಿದೆ.
ಇನ್ನೊಂದೆಡೆ ನವಕೇರಳ ಸಮಾವೇಶದಲ್ಲಿ ಭಾಗವಹಿಸದ ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರು ಮತ್ತು ಕುಟುಂಬಶ್ರೀ ಕಾರ್ಯಕರ್ತರಿಗೆ ಉದ್ಯೋಗ ನೀಡದಿರುವ ಹಾಗೂ ಕುಟುಂಬಶ್ರೀ ಕಾರ್ಯಕರ್ತರಿಗೆ ಸವಲತ್ತುಗಳನ್ನು ತಡೆಹಿಡಿಯುವ ಬಗ್ಗೆ ಬೆದರಿಕೆ ಹಾಕಲಾಗುತ್ತಿದೆ ಎಂದೂ ಶ್ರೀಕಾಂತ್ ಆರೋಪಿಸಿದರು
ನವ ಕೇರಳ ಸಮಾವೇಶಕ್ಕಾಗಿ ಹಣಸಂಗ್ರಹಿಸಿ ನೀಡಲು ಸರ್ಕಾರಿ ನೌಕರರಿಗೆ ಗುರಿ ನಿಗದಿಪಡಿಸಲಾಗಿದೆ. ಸಹಕಾರಿ ಸಂಘಗಳಿಂದ ಕಡ್ಡಾಯವಾಗಿ ದೇಣಿಗೆ ಸಂಗ್ರಹಿಸಲಾಗುತ್ತದೆ. ಮಾಫಿಯಾಗಳಿಂದಲೂ ಹಣ ವಸೂಲಿಮಾಡಲಾಗುತ್ತಿದೆ. ನವ ಕೇರಳ ಸಮಾವೇಶದ ನೆಪದಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು. ನವಕೇರಳ ಸಮಾವೇಶ ಜನರನ್ನು ದುಸ್ಥಿತಿಗೆ ತಳ್ಳುತ್ತಿರುವುದು ವಿಷಾದನೀಯ ಎಂದು ತಿಳಿಸಿದರು.