ಅಂಜೋರಾ : ಐದು ಸಾವಿರ ಜನಸಂಖ್ಯೆ ಹೊಂದಿರುವ ಅಂಜೋರಾ ಗ್ರಾಮವು ಛತ್ತೀಸಗಢ ವಿಧಾನಸಭಾ ಚುನಾವಣೆಯಲ್ಲಿ ಬಹಳ ಜನರ ಗಮನ ಸೆಳೆಯುತ್ತಿದೆ. ಎರಡು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಮತ ಯಾಚಿಸಲು ಈ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ.
ದುರ್ಗ ಮತ್ತು ರಾಜನಂದಗಾಂವ್ ಜಿಲ್ಲೆಗಳ ನಡುವಿನ ಗಡಿಯಲ್ಲಿದೆ ಅಂಜೋರಾ.
ದುರ್ಗ ಮತ್ತು ರಾಜನಂದಗಾಂವ್ ನಗರಗಳ ನಡುವಿನ ಮುಂಬೈ-ಹೌರಾ ರಾಷ್ಟ್ರೀಯ ಹೆದ್ದಾರಿ-53ರಲ್ಲಿ ದುರ್ಗ ಪಟ್ಟಣದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಈ ಗ್ರಾಮವನ್ನು ಅಂಜೋರಾ ಗ್ರಾಮ ಪಂಚಾಯಿತಿ (ರಾಜನಂದಗಾಂವ್) ಮತ್ತು ಅಂಜೋರಾ 'ಕೆಎಚ್ (ಬಿ)' ಗ್ರಾಮ ಪಂಚಾಯಿತಿ (ದುರ್ಗ) ಎಂಬ ಎರಡು ಪಂಚಾಯಿತಿಗಳು ನಿರ್ವಹಿಸುತ್ತವೆ.
ದುರ್ಗ ಗ್ರಾಮೀಣ ಮತ್ತು ರಾಜನಂದಗಾಂವ್ ಕ್ಷೇತ್ರಗಳ ಅಭ್ಯರ್ಥಿಗಳು ಪ್ರಚಾರಕ್ಕಾಗಿ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ.
'ಎರಡೂ ಕ್ಷೇತ್ರಗಳ ಅಭ್ಯರ್ಥಿಗಳು ಪ್ರಚಾರಕ್ಕಾಗಿ ಗ್ರಾಮಕ್ಕೆ ಭೇಟಿ ನೀಡುವುದರಿಂದ ಕೆಲವೊಮ್ಮೆ ಜನರು ಗೊಂದಲಕ್ಕೊಳಗಾಗುತ್ತಾರೆ. ಗ್ರಾಮದಲ್ಲಿ ಅಭ್ಯರ್ಥಿಗಳ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಕಾಣಬಹುದು. ಗ್ರಾಮವು ಇಬ್ಬರು ಶಾಸಕರನ್ನು ಆಯ್ಕೆ ಮಾಡುತ್ತದೆ' ಎಂದು ಅಂಜೋರಾ ಪಂಚಾಯತ್ ಸರಪಂಚ ಅಂಜು ಸಾಹು ಹೇಳಿದರು.
'ಗ್ರಾಮವನ್ನು ಬೀದಿಯೊಂದು ವಿಭಜಿಸಿದ್ದರೂ, ಇಲ್ಲಿನ ಜನರು ಶಾಂತಿಯುತ ಸಹಬಾಳ್ವೆ ನಡೆಸುತ್ತಿದ್ದಾರೆ. ಹಬ್ಬಗಳು ಮತ್ತು ಇತರ ಕಾರ್ಯಗಳನ್ನು ಒಟ್ಟಿಗೆ ಆಚರಿಸುತ್ತಾರೆ. ತಂದೆ ಮನೆ ಅಂಜೋರಾ ಬಿ ಪ್ರದೇಶದಲ್ಲಿದೆ, ಅವರು ದುರ್ಗ ಗ್ರಾಮೀಣ ಸ್ಥಾನದ ಅಭ್ಯರ್ಥಿಗೆ ಮತ ಚಲಾಯಿಸಿದರೆ, ಅತ್ತೆ ಮತ್ತು ಮಾವ ರಾಜನಂದಗಾಂವ್ ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾಯಿಸುತ್ತಾರೆ' ಎಂದು ಕಾಂಗ್ರೆಸ್ ಸ್ಥಳೀಯ ನಾಯಕಿ ಸಾಹು ಹೇಳಿದರು.
90 ಸದಸ್ಯ ಬಲದ ಛತ್ತೀಸಗಢ ವಿಧಾನಸಭೆಗೆ ಈ ತಿಂಗಳು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದ ಮತದಾನ ನಡೆಯಲಿರುವ 20 ಸ್ಥಾನಗಳಲ್ಲಿ ರಾಜನಂದಗಾಂವ್ ಕೂಡ ಸೇರಿದೆ.