ಮಂಜೇಶ್ವರ: ಜಿಲ್ಲೆಯಲ್ಲಿ ಸಂಪೂರ್ಣ ಡಿಜಿಟಲೀಕರಣವನ್ನು ಜಾರಿಗೆ ತರಲು ಜಿಲ್ಲಾಡಳಿತವು ಆರಂಭಿಸಿರುವ ಯೋಜನೆಯಾದ ‘ಕನೆಕ್ಟಿಂಗ್ ಕಾಸರಗೋಡು’ ಯೋಜನೆಯ ಭಾಗವಾಗಿ ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಮೆಗಾ ಕ್ಯಾಂಪ್‍ಗಳನ್ನು ಪ್ರಾರಂಭಿಸಲಾಗಿದೆ. ಜಿಲ್ಲಾಡಳಿತ ಹಾಗೂ ಸ್ಥಳೀಯಾಡಳಿತ ಇಲಾಖೆ, ಅಕ್ಷಯ ಕೇಂದ್ರಗಳ ಸಹಯೋಗದಲ್ಲಿ ಜಾರಿಗೊಳಿಸಿರುವ ‘ಟ್ರ್ಯಾಕ್ 300’ ಆಧಾರ್ ಹಕ್ಕು ಅಭಿಯಾನದ ಅಂಗವಾಗಿ ಆಯೋಜಿಸಿದ್ದ ‘ಆಧಾರ್ ಮತ್ತು ಇ-ಧನಂ’ ಶಿಬಿರಗಳು ನಡೆದವು. ಮಂಜೇಶ್ವರ ಬ್ಲಾಕ್‍ನ ಮೊದಲ ಶಿಬಿರವು ಮೀಂಜ ಗ್ರಾಮ ಪಂಚಾಯತಿ ಮೀಯಪದವಿನ ವಿದ್ಯಾವರ್ಧಕ ಎಯುಪಿ ಶಾಲೆಯಲ್ಲಿ ಗುರುವಾರ ನಡೆಯಿತು.
ಆಯೋಜಿಸಲಾದ ವಿಶೇಷ ಶಿಬಿರದಲ್ಲಿ 268 ಮಂದಿ ಆಧಾರ್ ನವೀಕರಣ ಮಾಡಿದ್ದಾರೆ. ಪ್ರಧಾನ ಮಂತ್ರಿ ವಿಮಾ ಯೋಜನೆಯ ಅರ್ಹತೆ ಸೌಲಭ್ಯವನ್ನು ಸಾರ್ವಜನಿಕರಿಗೆ ಒದಗಿಸಲಾಗಿದೆ. ಸಾರ್ವಜನಿಕರಲ್ಲಿ ಆರ್ಥಿಕ ಅರಿವು ಮೂಡಿಸಲು ಕಾರ್ಯಕ್ರಮದ ಅಂಗವಾಗಿ ‘ಇ-ಧನಂ’ ಎಂಬ ಜ್ಞಾನ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ ಉದ್ಘಾಟಿಸಿದರು. ನವೆಂಬರ್ 13 ಮತ್ತು 19 ರಂದು ಮಂಜೇಶ್ವರ, ಮಂಗಲ್ಪಾಡಿ ಮತ್ತು ಪುತ್ತಿಗೆ ಪಂಚಾಯತಿಗಳಲ್ಲಿ ಶಿಬಿರಗಳು ನಡೆಯಲಿವೆ.