ನವದೆಹಲಿ: ಸದನದಲ್ಲಿ ಅಂಗೀಕಾರಗೊಂಡಿರುವ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕುತ್ತಿಲ್ಲ ಎಂಬ ಪಂಜಾಬ್ ಸರ್ಕಾರದ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, 'ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ' ಎಂದು ರಾಜ್ಯಪಾಲರಿಗೆ ಖಡಕ್ ಎಚ್ಚರಿಕೆ ನೀಡಿದೆ.
ನವದೆಹಲಿ: ಸದನದಲ್ಲಿ ಅಂಗೀಕಾರಗೊಂಡಿರುವ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕುತ್ತಿಲ್ಲ ಎಂಬ ಪಂಜಾಬ್ ಸರ್ಕಾರದ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, 'ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ' ಎಂದು ರಾಜ್ಯಪಾಲರಿಗೆ ಖಡಕ್ ಎಚ್ಚರಿಕೆ ನೀಡಿದೆ.
ರಾಜ್ಯ ಸರ್ಕಾರದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾ. ಜೆ.ಬಿ.ಪಾರ್ಡಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ಪೀಠವು, 'ಇದು ನಿಜಕ್ಕೂ ಗಂಭೀರ ವಿಷಯ' ಎಂದು ಆತಂಕ ವ್ಯಕ್ತಪಡಿಸಿದೆ.
'ನಮ್ಮ ದೇಶವು ಸ್ಥಾಪಿತ ಪರಂಪರೆ ಹಾಗೂ ಪದ್ಧತಿಗಳ ಆಧಾರದಲ್ಲಿ ನಡೆಯುತ್ತಿದೆ. ಅದನ್ನು ಅನುಸರಿಸಬೇಕಾದ ಅಗತ್ಯವಿದೆ' ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಪಂಜಾಬ್ ರಾಜ್ಯಪಾಲರು ಮಸೂದಗೆ ಸಹಿ ಹಾಕದಿರುವುದೂ ಅಲ್ಲದೆ, ವಿಧಾಸಭೆ ಅಧಿವೇಶನವನ್ನು ಸಂವಿಧಾನ ಬಾಹಿರ ಎಂದು ಕರೆದಿರುವುದನ್ನು ಪ್ರಶ್ನಿಸಿದೆ.
'ಪಂಜಾಬ್ ಸರ್ಕಾರವು ಬಜೆಟ್ ಅಧಿವೇಶನವನ್ನು ಏಕೆ ಮುಂದೂಡಿತು. ನಂತರ ಅದನ್ನು ಏಕೆ ಮುಂದುವರಿಸಲಿಲ್ಲ' ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಪ್ರಜಾಪ್ರಭುತ್ವ ಎಂಬುದು ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಮೂಲಕ ನಡೆಯಲಿದೆ. ಮಸೂದಗೆ ಒಪ್ಪಿಗೆ ನೀಡಲು ರಾಜ್ಯಪಾಲರ ಅಧಿಕಾರ ಕುರಿತಂತೆ ಕಾನೂನು ಇತ್ಯರ್ಥಗೊಳಿಸಲು ಕಿರು ಆದೇಶ ನೀಡಲಾಗುವುದು ಎಂದು ಹೇಳಿದೆ.
ಮಸೂದೆಗಳಿಗೆ ಸಹಿ ಹಾಕಲು ಅನಗತ್ಯ ವಿಳಂಬ ಮಾಡುತ್ತಿರುವ ಬಗ್ಗೆ ಪಂಜಾಬ್ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ನಂತರ ತಮಿಳುನಾಡು ಸರ್ಕಾರವೂ ಇದೇ ಹಾದಿ ತುಳಿದು, ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿತ್ತು. ಇಂಥ ಅಸಂವಿಧಾನಿಕ ನಿಷ್ಕ್ರಿಯೆಯು ರಾಜ್ಯದ ಆಡಳಿತ ಯಂತ್ರವನ್ನೇ ನಿಲ್ಲಿಸಿದೆ ಎಂದು ಆರೋಪಿಸಿತ್ತು.