ಬೆಂಗಳೂರು: ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಅನಿವಾಸಿ ಭಾರತೀಯರಿಗೆ (NRI) ಬೆಂಗಳೂರು ಮತ್ತು ಮುಂಬೈ ನಗರಗಳು ಪ್ರಮುಖ ಆಯ್ಕೆಗಳಾಗಿವೆ ಎಂದು ಎನ್‌ಆರ್‌ಐ ರಿಯಲ್ ಎಸ್ಟೇಟ್, 2023 ರ ವರದಿ ತಿಳಿಸಿದೆ.
ವರದಿ ಪ್ರಕಾರ, ಭಾರತೀಯ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಎನ್‌ಆರ್‌ಐ ಕೊಡುಗೆ ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ. ಕಳೆದ ಕೆಲವು ವರ್ಷಗಳಲ್ಲಿ ಮತ್ತು ದೇಶದಲ್ಲಿನ ಒಟ್ಟಾರೆ ಪ್ರಾಥಮಿಕ ಮಾರಾಟ ಶೇಕಡಾ 17 ಕ್ಕೆ ಏರಿಕೆಯಾಗುತ್ತಿದೆ ಎಂದು ವರದಿ ಹೇಳುತ್ತದೆ.
ಈ ನಗರಗಳಲ್ಲಿನ ಕಾಸ್ಮೋಪಾಲಿಟನ್ ಜೀವನಶೈಲಿ, ವಿಶ್ವದರ್ಜೆಯ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಸ್ಟಾರ್ಟಪ್ ಪರಿಸರ ವ್ಯವಸ್ಥೆಯೊಂದಿಗೆ ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ಆದಾಯದಲ್ಲಿ ಗಣನೀಯವಾಗಿ ಹೆಚ್ಚಾಗಿದೆ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬೆಂಗಳೂರು ಉತ್ತಮ ಹೂಡಿಕೆಯ ತಾಣವಾಗಿದೆ ಎಂದು NoBroker.com ಕಂಪನಿಯು ಮಂಗಳವಾರದ 15 ಪುಟಗಳ ವರದಿ ಹೇಳಿದೆ.
ಕಂಪೆನಿಯ ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಸುಮಾರು ಶೇಕಡಾ 29ರಷ್ಟು ಮಂದಿ ರಿಯಲ್ ಎಸ್ಟೇಟ್ ಹೂಡಿಕೆಗೆ ತಮ್ಮ ಅಗ್ರ ಆಯ್ಕೆಯಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದ್ದಾರೆ, ನಂತರ ಮುಂಬೈ, ಇದು ಶೇಕಡಾ 24ರಷ್ಟು ಎನ್ಆರ್ ಐ ಖರೀದಿದಾರರ ಆದ್ಯತೆಯನ್ನು ಗಳಿಸಿದೆ. 12,000 ಕ್ಕೂ ಹೆಚ್ಚು ಗ್ರಾಹಕರೊಂದಿಗೆ ನಡೆಸಿದ ಸಮೀಕ್ಷೆಯನ್ನು ಆಧರಿಸಿ ಈ ವರದಿಯನ್ನು ಮಾಡಲಾಗಿದೆ.
ಶೇಕಡಾ 54ರಷ್ಟು ಜನರು ಸುರಕ್ಷತೆ, ಅನುಕೂಲತೆ, ಸೌಕರ್ಯಗಳು ಮತ್ತು ಸಮುದಾಯ ಜೀವನಕ್ಕೆ ಒತ್ತು ನೀಡುವ ಮೂಲಕ ಗೇಟೆಡ್ ಸಮುದಾಯಗಳಲ್ಲಿ ಹೂಡಿಕೆ ಮಾಡಲು ಬಲವಾದ ಒಲವನ್ನು ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯು ಹೇಳುತ್ತದೆ. ಆಸ್ತಿ ಪ್ರಕಾರಗಳಿಗೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿದವರು 3 ಬಿಹೆಚ್ ಕೆ ಮನೆಗಳನ್ನು ಹೆಚ್ಚಾಗಿ ಆರಿಸಿಕೊಂಡಿದ್ದಾರೆ. ಜೊತೆಗೆ ಶೇಕಡಾ 40ರಷ್ಟು ಜನರು 1 ಕೋಟಿ ರೂಪಾಯಿಗಿಂತ ಹೆಚ್ಚಿನ ಬಜೆಟ್ ನ ನಿವೇಶನ ಆರಿಸಿಕೊಂಡಿದ್ದಾರೆ. ಹೆಚ್ಚಿನ ಮೌಲ್ಯದ ಹೂಡಿಕೆಗಳತ್ತ ಒಲವು ತೋರುತ್ತಾರೆ, ಪ್ರೀಮಿಯಂ ಮತ್ತು ಐಷಾರಾಮಿ ರಿಯಲ್ ಎಸ್ಟೇಟ್ ಆಯ್ಕೆಗಳ ಮೇಲೆ ಗ್ರಾಹಕರ ಒಲವು ಹೆಚ್ಚಾಗಿದೆ.
ಭಾರತೀಯ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆಯನ್ನು ಬಯಸುತ್ತಿರುವ ಹೆಚ್ಚಿನ ಎನ್‌ಆರ್‌ಐಗಳು (ಶೇ 34) ಐಟಿ ಅಥವಾ ತಂತ್ರಜ್ಞಾನ-ಸಂಬಂಧಿತ ಹಿನ್ನೆಲೆಯಿಂದ ಬಂದವರು, ನಂತರ ಶೇಕಡಾ 12ರಷ್ಟು ಮಂದಿ ಹಣಕಾಸು ಕ್ಷೇತ್ರದಿಂದ ಮತ್ತು ಶೇಕಡಾ 9ರಷ್ಟು ಮಂದಿ ಉದ್ಯಮಿಗಳು ಮತ್ತು ವೈದ್ಯಕೀಯ ಉದ್ಯಮ ಹಿನ್ನೆಲೆಯವರಾಗಿದ್ದಾರೆ ಎಂದು ವರದಿ ವಿವರಿಸಿದೆ.
ಹೆಚ್ಚುತ್ತಿರುವ ಬೇಡಿಕೆಯ ಹೊರತಾಗಿಯೂ ಬಾಡಿಗೆ ಆಸ್ತಿಗಳನ್ನು ನಿರ್ವಹಿಸುವುದು, ಬಾಡಿಗೆದಾರರನ್ನು ಹುಡುಕುವುದು, ಆಸ್ತಿ ತಪಾಸಣೆ, ಬಾಡಿಗೆ ಸಂಗ್ರಹಣೆ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳು, ಮಾಹಿತಿಯ ಕೊರತೆಯಂತಹ ಸವಾಲುಗಳನ್ನು ಎನ್ ಆರ್ ಐಗಳು ಎದುರಿಸುತ್ತಾರೆ. ಶೇಕಡಾ 52ರಷ್ಟು ಎನ್ ಆರ್ ಐ ಮಾಲೀಕರು ತಾವು ಆಸ್ತಿ ನಿರ್ವಹಣೆ ಸೇವೆಗಳನ್ನು ಬಯಸುವುದಾಗಿ ಹೇಳಿದ್ದಾರೆ.