ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಇತ್ತೀಚೆಗೆ ಬಿಡುಗಡೆಗೊಳಿಸಿದ 'ಭಾರತದಲ್ಲಿ ರಸ್ತೆ ಅಪಘಾತಗಳು-2022'ರ ವರದಿ ಅನೇಕ ಆಘಾತಕಾರಿ ಸಂಗತಿಗಳನ್ನು ಒಳಗೊಂಡಿದೆ. 2022ರಲ್ಲಿ ದೇಶದಾದ್ಯಂತ 4.61 ಲಕ್ಷ ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಲ್ಲಿ ಒಟ್ಟು 1.68 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ವರ್ಷವೊಂದರಲ್ಲಿ ರಸ್ತೆ ಅಪಘಾತಗಳಿಗೆ ಹೆಚ್ಚು ಜನರು ಬಲಿಯಾದ ಈವರೆಗಿನ ಗರಿಷ್ಠ ಸಂಖ್ಯೆ ಇದು. ರಸ್ತೆ ಮೂಲಸೌಕರ್ಯ ವಿಷಯದಲ್ಲಿ ಮತ್ತು ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಪ್ರಗತಿ ಕಂಡುಬಂದಿದ್ದರೂ, ಅಪಘಾತದ ಪ್ರಮಾಣ ತಗ್ಗದಿರುವುದು ಶೋಚನೀಯ ಸಂಗತಿ. ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ 2021ರಲ್ಲಿ 5ನೇ ಸ್ಥಾನದಲ್ಲಿದ್ದ ಬೆಂಗಳೂರು 2022ರಲ್ಲಿ ಎರಡನೇ ಸ್ಥಾನಕ್ಕೆ ತಲುಪಿರುವುದು ಆತಂಕದ ಸಂಗತಿ. ಅಲ್ಲದೆ, ರಾಜ್ಯದಲ್ಲಿ ಸಂಭವಿಸುವ ಅಪಘಾತಗಳಲ್ಲಿನ ಸಾವು- ನೋವಿನ ಪ್ರಕರಣಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಏರುಮುಖ ಕಂಡಿವೆ.
ಅಪಘಾತಗಳಿಗೆ ರಸ್ತೆ ಸರಿ ಇಲ್ಲದಿರುವುದು ಕಾರಣ ಎಂದು ಮೊದಲು ಹೇಳಲಾಗುತ್ತಿತ್ತು. ಆದರೆ, ಈಗ ರಸ್ತೆ ಸರಿ ಇರುವುದು ಕೂಡ (ಅತಿಯಾದ ವೇಗ) ಅಪಘಾತಗಳಿಗೆ ಕಾರಣವಾಗುತ್ತಿದೆ. ಮುಖ್ಯವಾಗಿ, ವಾಹನ ಚಾಲಕರು ಸಂಚಾರ ನಿಯಮಗಳನ್ನು ಗಾಳಿಗೆ ತೂರುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಏರುತ್ತಲೇ ಸಾಗಿದೆ. ಇದಕ್ಕೆ ಕಡಿವಾಣ ಹಾಕಲು 'ದಂಡಾಸ್ತ್ರ' ಪ್ರಯೋಗಿಸಿದರೂ, ಅದು ತಾತ್ಕಾಲಿಕವಾಗಿ ಪರಿಣಾಮ ಬೀರಿತು.
ಕೆಲವು ಪ್ರವಾಸಿ ಕಾರ್ಗಳು ಮತ್ತು ಟ್ರಕ್ಗಳು ಅಪಘಾತವಾಗುವುದರ ಹಿಂದೆ ಅವುಗಳ ಚಾಲಕರು ನಿದ್ರೆಗೆಟ್ಟು, ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡದೆ ಸುದೀರ್ಘ ಅವಧಿಯ ಡ್ರೖೆವಿಂಗ್ ಮಾಡುವುದು ಹಾಗೂ ಮದ್ಯಪಾನ, ಮಾದಕ ಪದಾರ್ಥಗಳನ್ನು ಸೇವನೆ ಮಾಡಿ ಚಾಲನೆ ಮಾಡುವುದು ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಸುರಕ್ಷತೆಗಾಗಿ ಇರುವ ಹೆಲ್ಮೆಟ್ ಬಳಸಲು ತಾತ್ಸಾರ, ಸೀಟ್ಬೆಲ್ಟ್ ಧರಿಸುವ ಬಗೆಗೂ ಇದೇ ಮನೋಭಾವ ಎದ್ದು ಕಾಣುತ್ತದೆ.
ಇವು ಮನುಷ್ಯನ ತಪ್ಪಿನಿಂದಾಗುವ ಅಪಘಾತಗಳಾದರೆ, ಸರ್ಕಾರದ ತಪ್ಪಿನಿಂದಾಗುವ ಅಪಘಾತಗಳ ಸಂಖ್ಯೆಯೂ ಕಡಿಮೆ ಏನಿಲ್ಲ. ರಸ್ತೆಗಳ ಗುಣಮಟ್ಟ ನಿರೀಕ್ಷೆಯಷ್ಟು ಇಲ್ಲ ಎನ್ನುವುದು ಸತ್ಯ. ಹಾಗೆಯೇ ಅವುಗಳ ನಿರ್ವಹಣೆ ನಿರಂತರವಾಗಿ ನಡೆಯುವುದಿಲ್ಲ. ರಸ್ತೆಗಳನ್ನು ನಿರ್ವಿುಸುವಾಗ ಮತ್ತು ಅವುಗಳ ದುರಸ್ತಿ ಮಾಡುವಾಗ ನಿರ್ದಿಷ್ಟ ಮಾನದಂಡ ಅನುಸರಿಸುವುದಿಲ್ಲ. ಮಾನವರ ತಪುಪ ಮತ್ತು ಸರ್ಕಾರದ ವೈಫಲ್ಯಗಳ ಕುರಿತಂತೆ ಜನಜಾಗೃತಿ ಮೂಡಬೇಕು. ಸರ್ಕಾರ ಮತ್ತು ಜನರು ಕೈಜೋಡಿಸಿ ಸೂಕ್ತ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸಿದರೆ ಅಪಘಾತಗಳ ಸಂಖ್ಯೆ ಇಳಿಮುಖವಾಗುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಮತ್ತು ಗಂಭೀರ ಹೆಜ್ಜೆಗಳನ್ನು ಇರಿಸಬೇಕು.