ಕೊಚ್ಚಿ: ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ (ಕುಸಾಟ್) ಕ್ಯಾಂಪಸ್ ನಲ್ಲಿ ಸಂಭವಿಸಿದ ಅವಘಡದಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆಯಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲರನ್ನು ವಜಾಗೊಳಿಸಲಾಗಿದೆ.
ಡಾ. ದೀಪಕ್ ಕುಮಾರ್ ಸಾಹು ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ವಿಸಿ ಡಾ.ಪಿ.ಜಿ.ಶಂಕರನ್ ಮಾಹಿತಿ ನೀಡಿದ್ದಾರೆ. ಟೆಕ್ ಫೆಸ್ಟ್‍ಗೆ ಸಂಬಂಧಿಸಿದಂತೆ ಮ್ಯೂಸಿಕ್ ನೈಟ್ ಗೆ ಪೋಲೀಸ್ ಭದ್ರತೆ ಕೋರಿ ರಿಜಿಸ್ಟ್ರಾರ್‍ಗೆ ಪ್ರಾಂಶುಪಾಲರ ಪತ್ರ ಹೊರಬಿದ್ದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಅವಘಡದ ಕುರಿತು ತನಿಖೆ ನಡೆಸಲು ಸಿಂಡಿಕೇಟ್ ತ್ರಿಸದಸ್ಯ ಸಮಿತಿಯನ್ನು ನೇಮಿಸಿದ್ದು ಶುಕ್ರವಾರ ವರದಿ ಸಲ್ಲಿಸಲಿದೆ ಎಂದು ವಿಸಿ ತಿಳಿಸಿದ್ದಾರೆ. ತನಿಖೆಯನ್ನು ಘೋಷಿಸಿದ ಕಾರಣ ಪ್ರಾಂಶುಪಾಲರನ್ನು ಸ್ಥಾನದಿಂದ ಕೆಳಗಿಳಿಸಲು ಕೇಳಲಾಯಿತು ಎಂದು ಅವರು ಹೇಳಿದ್ದಾರೆ.
ಕೆ.ಕೆ.ಕೃಷ್ಣಕುಮಾರ್, ಡಾ.ಶಶಿಗೋಪಾಲನ್ ಮತ್ತು ಡಾ.ಲಾಲಿ ತನಿಖಾ ಸಮಿತಿಯ ಸದಸ್ಯರಾಗಿದ್ದಾರೆ. ತನಿಖಾ ಸಮಿತಿಯು ಅವಘಡದ ಕಾರಣವನ್ನು ಮಾತ್ರವಲ್ಲದೆ ಅಂತಹ ಸಂದರ್ಭಗಳನ್ನು ತಪ್ಪಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಶಿಫಾರಸುಗಳನ್ನು ವರದಿಯಲ್ಲಿ ಒಳಗೊಂಡಿರುತ್ತದೆ. ಏತನ್ಮಧ್ಯೆ, ಮಾನವ ಹಕ್ಕುಗಳ ಆಯೋಗವು ಕುಸಾಟ್‍ನಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ವಿವರವಾದ ತನಿಖೆಯನ್ನು ಮತ್ತು ತುರ್ತು ವರದಿಯನ್ನು ಸಲ್ಲಿಸುವಂತೆ ಕೇಳಿದೆ. ಘಟನೆ ಸಂಬಂಧ ಆಯೋಗ ಪ್ರಕರಣ ದಾಖಲಿಸಿಕೊಂಡಿದೆ. ಆಲುವಾ ಗ್ರಾಮಾಂತರ ಎಸ್ಪಿ ಮತ್ತು ಕೊಚ್ಚಿನ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ವಿ.ಕೆ. ಬೆನಕುಮಾರಿ ಅವರಿಗೆ ಸೂಚನೆ ನೀಡಲಾಗಿದೆ.