ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿ ಕೇರಳ ರಾಜ್ಯ ವ್ಯಾಪಿಯಾಗಿ ಮಂಗಳವಾರ ನಡೆದ ಖಾಸಗಿ ಬಸ್ ಮುಷ್ಕರ ದಿಂದ ಕಾಸರಗೋಡು ಜಿಲ್ಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ಮುಖ್ಯ ರಸ್ತೆಗಳಲ್ಲಿ ಜನರು ಸಂಚಾರಕ್ಕೆ ಕೆಎಸ್ಸಾರ್ಟಿಸಿ ಬಸ್‍ಗಳನ್ನು ಆಶ್ರಯಿಸಿದ್ದರೆ, ಗ್ರಮೀಣ ಪ್ರದೇಶಗಳಲ್ಲಿ ದುಬಾರಿ ಹಣ ತೆತ್ತು ಸರ್ವೀಸ್ ವಾಹನಗಳ ಮೊರೆಹೋಗಬೇಕಾಯಿತು. ಕಾಸರಗೋಡು ಜಿಲ್ಲೆಯಲ್ಲಿ 350ಕ್ಕೂ ಹೆಚ್ಚು ಖಾಸಗಿ ಬಸ್‍ಗಳು ಸರ್ವೀಸ್ ನಡೆಸುತ್ತಿದ್ದು, ಮುಷ್ಕರದ ಹಿನ್ನೆಲೆಯಲ್ಲಿ ಯಾವುದೇ ಬಸ್ ರಸ್ತೆಗಿಳಿಯಲಿಲ್ಲ. ಕಾಸರಗೋಡು ಬಂದಡ್ಕ, ಕುಂಬಳೆ-ಬಂಬ್ರಾಣ, ಕುಂಬಳೆ-ಬದಿಯಡ್ಕ, ಮುಳ್ಳೇರಿಯ, ಕುಂಬಳೆ-ಸೀತಾಂಗೋಳಿ-ಪುತ್ತಿಗೆ-ಪೆರ್ಲ ಸೇರಿದಂತೆ ಕೆಎಸ್ಸಾರ್ಟಿಸಿ ಬಸ್ ಸಂಚಾರವಿಲ್ಲದ ರೂಟ್‍ಗಳಲ್ಲಿ ಜನರು ಹೆಚ್ಚಿನ ಸಮಸ್ಯೆ ಎದುರಿಸಬೇಕಾಯಿತು.
ವಿದ್ಯಾರ್ಥಿಗಳ ಪ್ರಯಾಣ ದರವನ್ನು ಹೆಚ್ಚಿಸಬೇಕು, ಬಸ್‍ಗಳಲ್ಲಿ ಕ್ಯಾಮೆರಾ ಮತ್ತು ಸೀಟ್‍ಬೆಲ್ಟ್ ಅಳವಡಿಕೆಯನ್ನು ಕೈಬಿಡಬೇಕು, 140 ಕಿ.ಮೀ. ದೂರದ ಮಿತಿಯನ್ನು ಪರಿಗಣಿಸದೆ ಅಸ್ತಿತ್ವದಲ್ಲಿರುವ ಎಲ್ಲಾ ಬಸ್‍ಗಳ ಪರವಾನಿಗೆಯನ್ನು ನವೀಕರಿಸಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳೊಂದಿಗೆ ಮುಷ್ಕರ ನಡೆಸಲಾಯಿತು. ಜಂಟಿ ಸಮಿತಿ ಸಲ್ಲಿಸಿರುವ ಬೇಡಿಕೆಗಳಿಗೆ ಅವಕಾಶ ನೀಡದಿದ್ದರೆ ನ.21ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿವರೆಗೆ ಸೇವೆ ಸ್ಥಗಿತಗೊಳಿಸಲೂ ಖಾಸಗಿ ಬಸ್ ಮಾಲಿಕರ ಸಂಘಟನೆ ತೀರ್ಮಾನಿಸಿದೆ.