ನವದೆಹಲಿ: ವಿವಾಹ (ಗೃಹಸ್ಥ) ವ್ಯವಸ್ಥೆ ಪಾವಿತ್ರ್ಯತೆಯನ್ನು ಹೊಂದಿದೆ. ಆದ್ದರಿಂದ ವ್ಯಭಿಚಾರವನ್ನು ಮತ್ತೆ ಅಪರಾಧದ ವ್ಯಾಪ್ತಿಗೆ ತರಬೇಕು ಎಂದು ಸಂಸದೀಯ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
2018 ರ ಸೆಪ್ಟೆಂಬರ್ ನಲ್ಲಿ ತೀರ್ಪು ಪ್ರಕಟಿಸಿದ್ದ ಸುಪ್ರೀಂ ಕೋರ್ಟ್, ವ್ಯಭಿಚಾರವನ್ನು ಅಪರಾಧವಲ್ಲ ಎಂಬ ತೀರ್ಪು ಪ್ರಕಟಿಸಿತ್ತು.ಈ ವರ್ಷ ಸೆಪ್ಟೆಂಬರ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದ್ದ ಭಾರತೀಯ ನ್ಯಾಯ ಸಂಹಿತೆ ಮಸೂದೆಗೆ ಸಂಬಂಧಿಸಿದ ವರದಿಯಲ್ಲಿ ಸಂಸದೀಯ ಮಂಡಳಿ ಈ ಶಿಫಾರಸ್ಸನ್ನು ಮುಂದಿಟ್ಟಿದೆ.
ಪರಿಷ್ಕೃತ ವ್ಯಭಿಚಾರ ಕಾನೂನಿನಲ್ಲಿ ಇದನ್ನು "ಲಿಂಗ-ತಟಸ್ಥ" ಅಪರಾಧ ಎಂದು ಪರಿಗಣಿಸಬೇಕು ಎಂದು ವರದಿ ಹೇಳಿದೆ ಮತ್ತು ಪುರುಷ ಮತ್ತು ಮಹಿಳೆ - ಎರಡೂ ಪಕ್ಷಗಳನ್ನು ಸಮಾನ ಹೊಣೆಗಾರರನ್ನಾಗಿ ಮಾಡಲು ಒತ್ತಾಯಿಸಿದೆ.
ಸಮಿತಿಯ ವರದಿಯನ್ನು ಸರ್ಕಾರವು ಅಂಗೀಕರಿಸಿದರೆ, "ವ್ಯಭಿಚಾರ ಅಪರಾಧವಾಗಬಾರದು ಎಂಬ 2018 ರ ಸುಪ್ರೀಂ ಕೋರ್ಟ್‌ನ ಪಂಚ ಸದಸ್ಯ ಪೀಠ ನೀಡಿದ್ದ ಮಹತ್ವದ ತೀರ್ಪಿಗೆ ವ್ಯತಿರಿಕ್ತವಾಗಿರಲಿದೆ.
ಭಾರತೀಯ ನ್ಯಾಯ ಸಂಹಿತಾವು ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಪುರಾವೆಗಳ ಕಾಯಿದೆಯನ್ನು ಬದಲಿಸುವ ಮೂರು ಗುಂಪಿನ ಭಾಗವಾಗಿದೆ. ಇದನ್ನು ಹೆಚ್ಚಿನ ಪರಿಶೀಲನೆಗಾಗಿ ಬಿಜೆಪಿ ಸಂಸದ ಬ್ರಿಜ್ ಲಾಲ್ ನೇತೃತ್ವದ ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಗೆ ಆಗಸ್ಟ್‌ನಲ್ಲಿ ಕಳುಹಿಸಲಾಗಿತ್ತು.