ಚೆನೈ: ಅನಾರೋಗ್ಯದಿಂದ ಬಳಲುತ್ತಿದ್ದ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಎಸ್ ವೆಂಕಟರಾಮನ್ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ವೆಂಕಟರಾಮನ್ ಭಾರತೀಯ ಆಡಳಿತ ಸೇವೆಯ ಸದಸ್ಯರಾಗಿದ್ದರು ಮತ್ತು ಆರ್‌ಬಿಐ ಗವರ್ನರ್ ಪಾತ್ರ ವಹಿಸಿಕೊಳ್ಳುವ ಮೊದಲು ಅವರು ಹಣಕಾಸು ಕಾರ್ಯದರ್ಶಿಯಾಗಿ ಮತ್ತು ನಂತರ ಕರ್ನಾಟಕ ಸರ್ಕಾರದ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.
ವೆಂಕಟರಾಮನ್ ಡಿಸೆಂಬರ್ 1990 ಮತ್ತು ಡಿಸೆಂಬರ್ 1992 ರ ನಡುವೆ ಆರ್‌ಬಿಐಗೆ ಸೇವೆ ಸಲ್ಲಿಸಿದ್ದರು. ಇದರ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರ ಕೊಡುಗೆಗಳನ್ನು ಸ್ಮರಿಸಿರುವ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್, ವೆಂಕಟರಾಮನ್ ಅದ್ಬುತ ವ್ಯಕ್ತಿತ್ವವುಳ್ಳ, ಜನರ ಸೇವಕ ಎಂದು ಬಣ್ಣಿಸಿದ್ದಾರೆ.
ಅವರ ಅವಧಿಯಲ್ಲಿ ಭಾರತ ಐಎಂಎಫ್‌ನ ಸ್ಥಿರೀಕರಣ ಕಾರ್ಯಕ್ರಮವನ್ನು ಅಳವಡಿಸಿಕೊಂಡು, ರೂಪಾಯಿ ಅಪಮೌಲ್ಯೀಕರಣ ಮತ್ತು ಆರ್ಥಿಕ ಸುಧಾರಣೆ ಕಾರ್ಯಕ್ರಮ ಪ್ರಾರಂಭಿಸಿತು ಎಂದು ಆರ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.