ನವದೆಹಲಿ: ಮದುವೆ ಹಕ್ಕು ಎಂಬುದು ಮನುಷ್ಯನ ಸ್ವಾತಂತ್ರ್ಯದೊಂದಿಗೇ ಬರುವ ಅಧಿಕಾರ. ಇದು ಸಂವಿಧಾನ ಖಾತ್ರಿಪಡಿಸಿರುವ ಬದುಕುವ ಹಕ್ಕಿನ ಮತ್ತೊಂದು ಅವಿಭಾಜ್ಯ ಭಾಗವೇ ಆಗಿದೆ. ಹೀಗಾಗಿ ಇಬ್ಬರು ವಯಸ್ಕರು ಮದುವೆಯಾಗಲು ಸಮ್ಮತಿಸಿದ ಸಂದರ್ಭದಲ್ಲಿ ಅವರ ಪಾಲಕರು, ಸಮಾಜ ಅಥವಾ ಸರ್ಕಾರವು ತಡೆಯೊಡ್ಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ತಮ್ಮ ಕುಟುಂಬದವ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿರುವುದಕ್ಕಾಗಿ ಕೆಲ ಸದಸ್ಯರು ಬೆದರಿಕೆ ಒಡ್ಡಿರುವ ಕಾರಣ ತಮಗೆ ಪೊಲೀಸರ ರಕ್ಷಣೆ ಒದಗಿಸುವಂತೆ ಜೋಡಿಯೊಂದು ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಈ ಮಾತು ಹೇಳಿದೆ.
'ಈ ತಿಂಗಳ ಆರಂಭದಲ್ಲಿ ಮುಸ್ಲಿಂ ಸಂಪ್ರದಾಯದಂತೆ ನಾವು ಮದುವೆಯಾಗಿದ್ದೇವೆ. ಯುವತಿಯ ಕುಟುಂಬದವರು ಬೆದರಿಕೆ ಒಡ್ಡುತ್ತಿದ್ದಾರೆ' ಎಂದು ಅರ್ಜಿದಾರರು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಿರುವ ಜೋಡಿಗೆ ಅಗತ್ಯ ರಕ್ಷಣೆ ಒದಗಿಸಬೇಕು ಎಂದು ಸಂಬಂಧಪಟ್ಟ ಪೊಲೀಸ್ ಅಧಕಾರಿಗಳಿಗೆ ಸೂಚಿಸಿದ ನ್ಯಾಯಾಲಯ, 'ಅರ್ಜಿದಾರರು ಮದುವೆಯಾಗುವ ಹಕ್ಕು ಹೊಂದಿದ್ದಾರೆ. ಅವರ ಈ ನಿರ್ಧಾರ ಮತ್ತು ಆಯ್ಕೆಗೆ ಸಾಮಾಜಿಕ ಅನುಮೋದನೆ ಅಗತ್ಯ ಇಲ್ಲ' ಎಂದು ನ್ಯಾಯಮೂರ್ತಿ ಸೌರಭ ಬ್ಯಾನರ್ಜಿ ಅವರಿದ್ದ ನ್ಯಾಯಪೀಠ ಇತ್ತೀಚೆಗೆ ಹೊರಡಿಸಿರುವ ಆದೇಶದಲ್ಲಿ ಹೇಳಿದೆ.