ತಿರುವನಂತಪುರಂ: ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಗುರುವಾರ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಅಮೆರಿಕದ ಹಿತಾಸಕ್ತಿಗಳಿಗೆ ಮಾತ್ರ ಧ್ವನಿ ಎತ್ತುವ ಮೂಲಕ ಭಾರತವನ್ನು ಅಮೆರಿಕದ ಕಾರ್ಯತಂತ್ರದ ಮಿತ್ರ ರಾಷ್ಟ್ರವನ್ನಾಗಿ ಮಾಡಿದೆ ಎಂದು ಆರೋಪಿಸಿದ್ದಾರೆ.
ಇಲ್ಲಿ ಪ್ಯಾಲೆಸ್ತೀನ್ ಒಗ್ಗಟ್ಟಿನ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಎಂ, ಭಾರತವು ಇಸ್ರೇಲ್‌ನೊಂದಿಗೆ ಹೆಚ್ಚಿನ ಸಂಖ್ಯೆಯ ವ್ಯಾಪಾರ ಒಪ್ಪಂದಗಳು ಮತ್ತು ರಕ್ಷಣಾ ಒಪ್ಪಂದಗಳನ್ನು ಹೊಂದಿದೆ. ಆ ಮೂಲಕ ಪ್ಯಾಲೆಸ್ತೀನ್ ಜನರ ಮೇಲೆ ಹಿಂಸಾತ್ಮಕ ಮತ್ತು ಕ್ರೂರ ದಾಳಿಯನ್ನು ನಡೆಸಲು ಆರ್ಥಿಕ ಪ್ರಚೋದನೆಯನ್ನು ನೀಡುತ್ತಿದೆ ಎಂದು ಹೇಳಿದರು.
'ಆ ಹಣ, ಅದು ನಮ್ಮ ಹಣ, ಈ ದೇಶದ ಜನರು ನೀಡಿದ್ದಾರೆ. ಅದನ್ನು ಇಸ್ರೇಲ್ ಪ್ಯಾಲೆಸ್ತೀನ್ ಜನರ ಮೇಲೆ ದಾಳಿ ಮಾಡಲು ನಿಧಿಯ ಮೂಲವಾಗಿ ಬಳಸುತ್ತಿದೆ ಎಂದು ವಿಜಯನ್ ಹೇಳಿದರು.
ಇಸ್ರೇಲ್‌ನಲ್ಲಿನ ಜಿಯೋನಿಸ್ಟ್‌ಗಳು ಈಗ ಹಿಟ್ಲರ್‌ನ ನಾಜಿಗಳ ತತ್ವಗಳನ್ನು ಅನುಸರಿಸುತ್ತಿದ್ದಾರೆ. ಆದ್ದರಿಂದ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರಕ್ಕೆ ಜಿಯೋನಿಸ್ಟ್‌ಗಳು ಆಪ್ತ ಸ್ನೇಹಿತರು. ಅವರೆಲ್ಲರೂ ಒಂದೇ ರೀತಿಯ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎಂದು ಅವರು ಆರೋಪಿಸಿದರು.
ಸುಮಾರು ಆರು ಮಿಲಿಯನ್ ಯುರೋಪಿಯನ್ ಯಹೂದಿಗಳನ್ನು ನಾಶಪಡಿಸುವ ಮೂಲಕ ನಾಜಿಗಳು ನರಮೇಧವನ್ನು ಮಾಡಿದ ಹತ್ಯಾಕಾಂಡದ ನಂತರ ನೆಲೆಸಲು ಪ್ಯಾಲೆಸ್ಟೈನ್‌ನಲ್ಲಿ ಯಹೂದಿಗಳಿಗೆ ಭೂಮಿಯನ್ನು ನೀಡಲಾಯಿತು.
ಇಸ್ರೇಲ್ ಹೇಗೆ ಸೃಷ್ಟಿಯಾಯಿತು ಎಂಬುದರ ಇತಿಹಾಸವನ್ನು ನೆನಪಿಸಿಕೊಂಡ ಅವರು, "ಯಹೂದಿಗಳ ಪುನರ್ವಸತಿಗೆ ಕಾರಣವಾಗುವುದಕ್ಕಿಂತ ಹೆಚ್ಚಾಗಿ, ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ಶಕ್ತಿಗಳ ಬೆಂಬಲದೊಂದಿಗೆ ಇಸ್ರೇಲ್ ಪ್ಯಾಲೆಸ್ತೀನ್ ಜನರನ್ನು ಸ್ಥಳಾಂತರಿಸುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದರು.