ಮಹಿಸನಗರ: ಗುಜರಾತ್‌ನ ಮಹಿಸನಗರ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ 1.97 ಲಕ್ಷ ರೂಪಾಯಿ ಮೌಲ್ಯದ, ಜಪ್ತಿ ಮಾಡಿದ್ದ 125 ಲಿಕ್ಕರ್ ಬಾಟಲಿಗಳು ಮತ್ತು 15 ಟೇಬಲ್ ಫ್ಯಾನ್‌ಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಸಹಾಯಕ ಸಬ್ ಇನ್‌ಸ್ಪೆಕ್ಟರ್(ಎಎಸ್‌ಐ) ಸೇರಿದಂತೆ ಐವರು ಪೊಲೀಸರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಾನ್‌ಪುರ ತಾಲೂಕಿನ ಬಾಕೋರ್ ಪೊಲೀಸ್ ಠಾಣೆಯ ಮಹಿಳಾ ಲಾಕ್‌ಅಪ್‌ನಲ್ಲಿ ಜಪ್ತಿ ಮಾಡಿದ ಮದ್ಯದ ಬಾಟಲಿಗಳು ಮತ್ತು ಫ್ಯಾನ್‌ಗಳನ್ನು ಸಂಗ್ರಹಿಸಲಾಗಿತ್ತು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಪಿಎಸ್ ವಾಳ್ವಿ ಅವರು ಪಿಟಿಐಗೆ ತಿಳಿಸಿದ್ದಾರೆ.
"ಬಾಕೋರ್ ಪೊಲೀಸರು 482 ದೇಶಿ ನಿರ್ಮಿತ ವಿದೇಶಿ ಮದ್ಯದ ಬಾಟಲಿಗಳು(ಐಎಂಎಫ್‌ಎಲ್) ಮತ್ತು 75 ಟೇಬಲ್ ಫ್ಯಾನ್‌ಗಳನ್ನು ವ್ಯಕ್ತಿಯೊಬ್ಬನಿಂದ ವಶಪಡಿಸಿಕೊಂಡಿದ್ದರು. ಮದ್ಯದ ಬಾಟಲಿಗಳನ್ನು ಟೇಬಲ್ ಫ್ಯಾನ್ ಪೆಟ್ಟಿಗೆಗಳ ಒಳಗೆ ಅಡಗಿಸಿ ಗುಜರಾತ್‌ಗೆ ಕಳ್ಳಸಾಗಣೆ ಮಾಡುವ ಪ್ರಯತ್ನವನ್ನು ಪೊಲೀಸರು ಭೇದಿಸಿದ್ದರು. ಅಂತಹ ಜಪ್ತಿ ಮಾಡಲಾದ ವಸ್ತುಗಳನ್ನು ಇರಿಸಲೆಂದೇ ಇರುವ ಗೋದಾಮು ಭರ್ತಿಯಾಗಿತ್ತು. ಹೀಗಾಗಿ ವಶಪಡಿಸಿಕೊಂಡ ಸರಕುಗಳನ್ನು ಮಹಿಳಾ ಲಾಕಪ್‌ನಲ್ಲಿ ಇರಿಸಲಾಗಿತ್ತು ಎಂದು ವಾಳ್ವಿ ಹೇಳಿದ್ದಾರೆ.
ಹಿರಿಯ ಅಧಿಕಾರಿಗಳ ಠಾಣಾ ಭೇಟಿಗೂ ಮುನ್ನ, ಜಪ್ತಿ ಮಡಲಾದ ವಸ್ತುಗಳ ದಾಖಲೆ ನೀಡುವಂತೆ ಹಾಗೂ ಪೊಲೀಸ್ ಠಾಣೆಯನ್ನು ಸ್ವಚ್ಛಗೊಳಿಸುವಂತೆ ಸೂಚಿಸಲಾಗಿತ್ತು. ಆದರೆ ಲಾಕಪ್ ಅನ್ನು ಸ್ವಚ್ಛಗೊಳಿಸುವಾಗ ಐಎಂಎಫ್‌ಎಲ್ ಬಾಟಲಿಗಳು ಹಾಗೂ ಫ್ಯಾನ್‌ಗಳಿದ್ದ ಕೆಲವು ಪೆಟ್ಟಿಗೆಗಳು ಖಾಲಿಯಾಗಿರುವುದು ಮತ್ತು ಕೆಲವನ್ನು ಒಡೆದಿರುವುದು ಕಂಡುಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿದಾಗ, 1.57 ಲಕ್ಷ ರೂ ಮೌಲ್ಯದ 125 ಐಎಂಎಫ್‌ಎಲ್ ಬಾಟಲಿಗಳು ಮತ್ತು 40,500 ರೂ ಮೌಲ್ಯದ 15 ಟೇಬಲ್ ಫ್ಯಾನ್‌ಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಇದರ ಬಂಇಕ ನ. 13ರಂದು ಎಫ್‌ಐಆರ್ ದಾಖಲಿಸಲಾಗಿತ್ತು ಎಂದು ವಾಳ್ವಿ ಮಾಹಿತಿ ನೀಡಿದ್ದಾರೆ.