ಬದಿಯಡ್ಕ: ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಬದಿಯಡ್ಕ ಸನಿಹದ ಚರ್ಲಡ್ಕದ ಜನವಾಸ ಕೇಂದ್ರದ ಸನಿಹ ರಸ್ತೆ ಅಂಚಿಗೆ ತ್ಯಾಜ್ಯ ಸುರಿಯಲು ಆಗಮಿಸಿದ ವಾಹನವನ್ನು ಬದಿಯಡ್ಕ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ರಸ್ತೆ ಬದಿ ಹಾಗೂ ಜನವಸತಿ ಪ್ರದೇಶಗಳಲ್ಲಿ ಕಸ ಸುರಿಯುತ್ತಿರುವುದರಿಂದ ಇಲ್ಲಿನ ನಿವಾಸಿಗಳು ಭಾರೀ ಸಮಸ್ಯೆ ಎದುರಿಸುತ್ತಿದ್ದು, ಈ ನಿಟ್ಟಿನಲ್ಲಿ ಸ್ಥಳೀಯರು ಒಟ್ಟಾಗಿ ತ್ಯಾಜ್ಯ ಸುರಿಯಲು ಆಗಿಸುವ ವಾಹನಗಳ ಬಗ್ಗೆ ನಿಗಾಯಿರಿಸಿದ್ದರು. ಸ್ಥಳೀಯರ ಕಾರ್ಯಾಚರಣೆ ಮಧ್ಯೆ ಕೋಳಿ ಮಾಂಸದ ತ್ಯಾಜ್ಯದೊಂದಿಗೆ ಆಗಮಿಸಿದ ವಾಹನವೊಂದು, ತ್ಯಾಜ್ಯ ಸುರಿಯಲು ಯತ್ನಿಸುತ್ತಿದ್ದಂತೆ ಸ್ಥಳೀಯರು ತಡೆಹಿಡಿದು ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಪಂಚಾಯಿತಿ ಕಾರ್ಯದರ್ಶಿ ಸಿ.ರಾಜೇಂದ್ರನ್, ಸಹಾಯಕ ಕಾರ್ಯದರ್ಶಿ ಎಂ. ವಿಜಯನ್ ಮತ್ತು ಶರತ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕಾಗಮಿಸಿ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮಾನ್ಯ ಕಾರ್ಮಾರಿನ ಅಭಿಷೇಕ್ (23) ವಿರುದ್ಧ ಪಂಚಾಯತ್ ರಾಜ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತ್ಯಾಜ್ಯ ಹೇರಿಕೊಮಡು ಬಂದಿದ್ದ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಪಂಚಾಯತ್ ರಾಜ್ ಕಾಯ್ದೆಯನ್ವಯ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸುರಿದಲ್ಲಿ 50 ಸಾವಿರ ದಂಡ ಪಾವತಿಸಬೇಕು. ಇದು ಸಾಧ್ಯವಾಗಿದ್ದಲ್ಲಿ, ವಶಪಡಿಸಿಕೊಂಡ ವಾಹನವನ್ನು ಹರಾಜು ಮಾಡಿ ದಂಡದ ಒತ್ತ ವಸೂಲಿಮಾಡಲಾಗುವುದು ಎಂದು ಪಂಚಾಯತ್ ಕಾರ್ಯದರ್ಶಿ ತಿಳಿಸಿದ್ದಾರೆ. ಬದಿಯಡ್ಕ ಪಂಚಾಯಿತಿಯ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಪೊಯ್ಯೆಕಂಡ, ಬದಿಯಡ್ಕ-ಕುಂಬಳೆ ರಸ್ತೆಯ ಪೊಲೀಸ್ ಠಾಣೆ ಸನಿಹದ ಪೆರಡಲ ತಿರುವು ಪ್ರದೇಶದಲ್ಲಿ ವ್ತಾಪಕವಾಗಿ ತ್ಯಾಜ್ಯ ಸುರಿಯಲಾಗುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ.