ನವದೆಹಲಿ: ಚಲನಚಿತ್ರಗಳ ಪೈರಸಿ ತಡೆಯುವ ನಿಟ್ಟಿನಲ್ಲಿ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ಪೈರಸಿಯಾದ ಸಿನಿಮಾಗಳನ್ನು ತೆಗೆದುಹಾಕಲು ನಿರ್ದೇಶಿಸುವ ಅಧಿಕಾರ ಹೊಂದಿರುವ 12 ನೋಡಲ್ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಶುಕ್ರವಾರ ನೇಮಕ ಮಾಡಿದೆ.
ಪೈರಸಿ ಹಾವಳಿಯಿಂದ ಪ್ರತಿ ವರ್ಷ ಸುಮಾರು ₹20 ಸಾವಿರ ಕೋಟಿ ನಷ್ಟ ಹೊಂದುತ್ತಿರುವ ಭಾರತೀಯ ಚಿತ್ರೋದ್ಯಮವನ್ನು ಈ ಸಮಸ್ಯೆಯಿಂದ ಪಾರು ಮಾಡಲು ಹೊಸ ಸಾಂಸ್ಥಿಕ ಕಾರ್ಯವಿಧಾನವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಸಂಸತ್ತಿನಲ್ಲಿ ಇತ್ತೀಚೆಗೆ ಅಂಗೀಕರಿಸಲಾದ ಸಿನಿಮಾಟೋಗ್ರಾಫ್ (ತಿದ್ದುಪಡಿ) ಕಾಯ್ದೆ-2023ರ ಅಡಿ, ಸಾಂಸ್ಥಿಕ ಕಾರ್ಯವಿಧಾನದ ಭಾಗವಾಗಿ ನೇಮಕ ಮಾಡಿರುವ ನೋಡಲ್ ಅಧಿಕಾರಿಗಳು ಪೈರಸಿ ಸಂಬಂಧದ ದೂರುಗಳನ್ನು ಸ್ವೀಕರಿಸಲಿದ್ದಾರೆ ಮತ್ತು ಪೈರಸಿ ಸಿನಿಮಾಗಳ ಲಿಂಕ್ ತೆಗೆದುಹಾಕಲು ಡಿಜಿಟಲ್ ವೇದಿಕೆಗಳಿಗೆ ನಿರ್ದೇಶನ ನೀಡಲಿದ್ದಾರೆ.
ನೋಡಲ್ ಅಧಿಕಾರಿಗಳು ದೂರುಗಳ ಪರಿಶೀಲನೆ ಮಾಡಿ, ನಿರ್ದೇಶನ ನೀಡಿದ 48 ಗಂಟೆಯೊಳಗಾಗಿ, ಪೈರಸಿ ಸಿನಿಮಾ ಅಥವಾ ವಿಷಯಗಳನ್ನು ಡಿಜಿಟಲ್ ವೇದಿಕೆಯು ಹೋಸ್ಟ್ ಮಾಡುವಂತಹ ತನ್ನ ಇಂಟರ್‌ನೆಟ್ ಲಿಂಕ್‌ಗಳನ್ನು ತೆಗೆದು ಹಾಕಬೇಕಿದೆ.
ಯೂಟ್ಯೂಬ್, ಟೆಲಿಗ್ರಾಮ್ ಚಾನೆಲ್‌ಗಳು, ವೆಬ್‌ಸೈಟ್‌ಗಳು ಅಥವಾ ಇತರ ಆನ್‌ಲೈನ್ ವೇದಿಕೆಗಳಿಂದ ಪೈರಸಿ ಸಿನಿಮಾ ತೆಗೆದುಹಾಕಲು ಹಕ್ಕುಸ್ವಾಮ್ಯ ಹೊಂದಿರುವವರು ಅಥವಾ ಅವರಿಂದ ಅಧಿಕಾರ ಪಡೆದ ಯಾವುದೇ ವ್ಯಕ್ತಿ ನೋಡಲ್ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
'ಸಚಿವಾಲಯ ಮತ್ತು ಸಿಬಿಎಫ್‌ಸಿ ಮುಂಬೈ ಕಚೇರಿ ಮತ್ತು ಪ್ರಾದೇಶಿಕ ಕಚೇರಿಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪೈರಸಿ ಹಾವಳಿ ಸಮಸ್ಯೆ ಗಮನಿಸಿದರೆ, ಪೈರಸಿ ಮಾಡುವವರಿಗೆ ₹3 ಲಕ್ಷದವರೆಗೆ ಅಥವಾ ಪೈರಸಿಗೆ ಒಳಗಾದ ಚಿತ್ರದ ಒಟ್ಟು ನಿರ್ಮಾಣ ವೆಚ್ಚದ ಶೇ 5ರಷ್ಟು ದಂಡ ವಿಧಿಸಬಹುದು' ಎಂದೂ ಸಚಿವ ಅನುರಾಗ್ ಸುದ್ದಿಗಾರರಿಗೆ ತಿಳಿಸಿದರು.
ಉತ್ತಮ ಸಿನಿಮಾಗಳನ್ನು ನಿರ್ಮಿಸಲು ಸಿನಿಮಾ ರಂಗದವರು ಸಾಕಷ್ಟು ಶ್ರಮ ಮತ್ತು ಸಮಯ ವ್ಯಯಿಸಿರುತ್ತಾರೆ. ಆದರೆ, ಪೈರಸಿಯಲ್ಲಿ ತೊಡಗಿರುವ ವ್ಯಕ್ತಿಗಳು ಅವುಗಳನ್ನು ಪೈರಸಿ ಮಾಡಿ ಆನ್‌ಲೈನ್ ತಾಣಗಳು ಮತ್ತು ತಮ್ಮದೇ ವ್ಯವಸ್ಥೆಗಳ ಮೂಲಕ ಪ್ರದರ್ಶಿಸುತ್ತಾರೆ. ಇದರಿಂದ ಚಿತ್ರೋದ್ಯಮವು ವಾರ್ಷಿಕ ₹20 ಸಾವಿರ ಕೋಟಿಯಿಂದ ₹25 ಸಾವಿರ ಕೋಟಿವರೆಗೆ ನಷ್ಟ ಅನುಭವಿಸುತ್ತಿದೆ ಎಂದು ಅವರು ಹೇಳಿದರು.
ಇದುವರೆಗೆ ಪೈರಸಿ ಮಾಡುವವರಿಗೆ ಭಾರತೀಯ ದಂಡ ಸಂಹಿತೆ ಅಥವಾ ಹಕ್ಕುಸ್ವಾಮ್ಯ ಕಾಯ್ದೆಯ ಮೂಲಕ ಮಾತ್ರ ಕಾನೂನು ಕ್ರಮ ತೆಗೆದುಕೊಳ್ಳಬಹುದಾಗಿತ್ತು. ಈ ಹೊಸ ವ್ಯವಸ್ಥೆಯು, ಪರಿಣಾಮಕಾರಿ ವ್ಯವಸ್ಥೆಯ ಕೊರತೆಯನ್ನು ನೀಗಿಸಲಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಇಂಟರ್‌ನೆಟ್ ಸಂಪರ್ಕದಿಂದಾಗಿ ಬಹಳಷ್ಟು ಜನರು ಸಿನಿಮಾಗಳನ್ನು ಉಚಿತ ವೀಕ್ಷಣೆಗೆ ಆಸಕ್ತಿ ತೋರುತ್ತಿದ್ದು, ಪೈರಸಿ ಪರಾಕಾಷ್ಠೆ ತಲುಪಿದೆ. ಸಚಿವಾಲಯದ ಈ ನಿರ್ಧಾರವು, ಪೈರಸಿ ತಡೆಗೆ ತ್ವರಿತ ಕ್ರಮ ಮತ್ತು ಉದ್ಯಮವನ್ನು ಪೈರಸಿ ಮುಕ್ತಗೊಳಿಸಲು ಪರಿಹಾರವಾಗಲಿದೆ' ಎಂದು ಅಧಿಕಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
-ಅನುರಾಗ್ ಠಾಕೂರ್ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಪೈರಸಿ ಚಿತ್ರರಂಗಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ದೊಡ್ಡ ಅಪಾಯವಾಗಿದೆ. ಈಗ ಅದರ ವಿರುದ್ಧ ಕ್ರಮ ಮಾತ್ರ. ಚಿತ್ರೋದ್ಯಮದ ದೊಡ್ಡ ಬೇಡಿಕೆ ಈಡೇರಿಸಿದ್ದೇವೆ