ಉತ್ತರ ಕಾಶಿ: ಉತ್ತರಕಾಶಿಯಲ್ಲಿ ಸಿಲ್ಕ್ಯಾರ ಟನಲ್ ನಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದ್ದು ಎಲ್ಲಾ 41 ಕಾರ್ಮಿಕರನ್ನು ಟನಲ್ ನಿಂದ ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ.
ಈ ಮೂಲಕ 17 ದಿನಗಳ ಕಾಲ ನಡೆದಿದ್ದ ರಕ್ಷಣಾ ಕಾರ್ಯಾಚರಣೆ ಪ್ರಕ್ರಿಯೆ ಯಶಸ್ವಿಯಾಗಿದೆ. ಪೈಪ್ ಮೂಲಕ 41 ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿದ್ದಾರೆ.
ಸುರಂಗದ ಒಳಗೆ ಸಿಲುಕಿದ್ದ ಕಾರ್ಮಿಕರಿಗೆ ಚಿಕಿತ್ಸೆ ನೀಡುವುದಕ್ಕಾಗಿ ರಕ್ಷಣಾ ಕಾರ್ಯಾಚರಣೆ ತಂಡ ಸಜ್ಜುಗೊಂಡಿದ್ದು, ಹೆಚ್ಚಿನ ವೈದ್ಯಕೀಯ ನೆರವು ಇರುವ ಕಾರ್ಮಿಕರನ್ನು ಏರ್ ಲಿಫ್ಟ್ ಮಾಡುವುದಕ್ಕೆ ವಾಯುಪಡೆ ಹೆಲಿಕಾಫ್ಟರ್ ಗಳನ್ನೂ ನಿಯೋಜಿಸಲಾಗಿದೆ. ಸುರಂಗದಲ್ಲಿ ಸಿಲುಕಿದ್ದ ಎಲ್ಲಾ 41 ಕಾರ್ಮಿಕರೂ ಸುರಕ್ಷಿತವಾಗಿ ಹೊರ ಬಂದಿದ್ದು ಅವರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ಒಟ್ಟು ನಾಲ್ಕು ಹಂತಗಳಲ್ಲಿ ಎಲ್ಲಾ 41 ಕಾರ್ಮಿಕರನ್ನೂ ಸುರಕ್ಷಿತವಾಗಿ ಹೊರಕರೆತರಲಾಗಿತ್ತು.
ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಹೊರತರುವ ರಕ್ಷಣಾ ಕಾರ್ಯಾಚರಣೆಯಲ್ಲಿ ದೈತ್ಯ ಯಂತ್ರಗಳನ್ನೂ ಬಳಸಲಾಗಿತ್ತು. ಆದರೆ ಅವುಗಳು ನಿಷ್ಕ್ರಿಯಗೊಂಡ ನಂತರ ಭರವಸೆ ಕ್ಷೀಣಿಸಿತ್ತು.
ಆದರೆ ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ (ಇಲಿ ಬಿಲ) ತಂತ್ರಜ್ಞಾನ ಬಳಸಲು ನಿರ್ಧರಿಸಿಲಾಯಿತು. 12 ಜನ ಇಲಿ ಬಿಲ ಕೊರೆಯುವ ತಂತ್ರಜ್ಞರ ತಂಡ ಸುರಂಗಕ್ಕೆ 2 ಅಡಿ ಅಗಲದ ಸುರಂಗವನ್ನು ಕೆಲವೇ ಗಂಟೆಗಳಲ್ಲಿ ಕೊರೆದು ಮುಗಿಸಿತು. ಅದಕ್ಕೆ ಮಂಗಳವಾರ ಸಂಜೆ 7ರ ಹೊತ್ತಿಗೆ ಕೊಳವೆ ಅಳವಡಿಸುವ ಕಾರ್ಯ ನಡೆಸಲಾಯಿತು.
ಅಂತಿಮವಾಗಿ ಕೊಳವೆಯೊಳಗೆ ಸ್ಟ್ರೆಚರ್ ಬಳಸಿ ರಾತ್ರಿ 8ಕ್ಕೆ ಮೊದಲ ಕಾರ್ಮಿಕನನ್ನು ಸುರಕ್ಷಿತವಾಗಿ ಹೊರತರುವಲ್ಲಿ ಕೇಂದ್ರ ಹಾಗು ರಾಜ್ಯ ವಿಪತ್ತು ನಿರ್ವಹಣಾ ತಂಡ ಸಫಲವಾಯಿತು. ನಂತರ ಒಬ್ಬರ ಹಿಂದೊಬ್ಬರಂತೆ ಕಾರ್ಮಿಕರು ಹೊರಬಂದರು. ಸ್ಥಳಕ್ಕೆ ಭೇಟಿ ನೀಡಿದ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಆರೋಗ್ಯ ವಿಚಾರಿಸಿ ಸಂಭ್ರಮಿಸಿದರು. ಸ್ಥಳೀಯರು ಸಿಹಿ ಹಂಚ ಹರ್ಷ ವ್ಯಕ್ತಪಡಿಸಿದರು.ಸುರಕ್ಷಿತವಾಗಿ ಹೊರ ಬಂದ ಕಾರ್ಮಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಅವರನ್ನು ಕರೆದೊಯ್ಯಲು ಆಂಬುಲೆನ್ಸ್‌ಗಳು ಕಾದು ನಿಂತಿದ್ದವು. ಸುರಂಗದೊಳಗೆ ಹೋದ ಆಂಬುಲೆನ್ಸ್‌ಗಳು ಕೊಳವೆಯಿಂದ ಹೊರಬರುತ್ತಿದ್ದ ಕಾರ್ಮಿಕರನ್ನು ಒಬ್ಬೊಬ್ಬರನ್ನಾಗಿ ಹೊತ್ತೊಯ್ದವು.
ಕಾರ್ಮಿಕರ ಚಿಕಿತ್ಸೆಗಾಗಿ ಉತ್ತರಕಾಶಿ ಜಿಲ್ಲೆಯಲ್ಲೇ ಪ್ರತ್ಯೇಕ ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದೆ. ಏಮ್ಸ್‌ನ ತಜ್ಞ ವೈದ್ಯರ ತಂಡವೇ ಇಲ್ಲಿ ಬೀಡು ಬಿಟ್ಟಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ತಕ್ಷಣ ಕಾರ್ಮಿಕರನ್ನು ಸಾಗಿಸಲು ಸೇನೆಯ ಹೆಲಿಕಾಪ್ಟರ್ ಸ್ಥಳದಲ್ಲೇ ಬೀಡು ಬಿಟ್ಟಿತ್ತು.
ಸುರಂಗದ ಹೊರಗೆ ಸಂಭ್ರಮವೇ ಮನೆ ಮಾಡಿತ್ತು.