ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪಿದೆ. ರಕ್ಷಣಾ ಕಾರ್ಯಾಚರಣೆಯ ಪ್ರಗತಿಯನ್ನು ಪರಿಶೀಲಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಖಾತೆಯ ರಾಜ್ಯ ಸಚಿವ ವಿ.ಕೆ. ಸಿಂಗ್ ಮತ್ತು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಧಾಮಿ, ಕಾರ್ಮಿಕರನ್ನು ರಕ್ಷಿಸಲು ಆಗರ್ ಯಂತ್ರದ ಮೂಲಕ 45 ಮೀಟರ್ ಪೈಪ್‌ಲೈನ್ ಹಾಕಲಾಗುತ್ತಿದೆ ಎಂದು ಹೇಳಿದರು.
'ಆಗರ್ ಯಂತ್ರದ ಮೂಲಕ 45 ಮೀಟರ್ ಪೈಪ್‌ಲೈನ್ ಹಾಕಲಾಗಿದೆ. ರಕ್ಷಣಾ ಕಾರ್ಯವು ಅಂತಿಮ ಹಂತದಲ್ಲಿದೆ. ಕೆಲವು ಅಡೆತಡೆಗಳಿವೆ. ಆದರೆ, ಕಾರ್ಮಿಕರನ್ನು ಆದಷ್ಟು ಬೇಗ ರಕ್ಷಿಸಲಾಗುವುದು ಎಂದು ನಾನು ಭಾವಿಸುತ್ತೇನೆ. ಕಾರ್ಮಿಕರ ಚಿಕಿತ್ಸೆಗಾಗಿ ಸಿದ್ಧತೆಗಳನ್ನು ಮಾಡಲಾಗಿದೆ' ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿದಿನ ರಕ್ಷಣಾ ಕಾರ್ಯಾಚರಣೆಯ ಮಾಹಿತಿ ಪಡೆಯುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಕಾರ್ಮಿಕರು, ತಜ್ಞರು ಹಗಲಿರುಳು ದುಡಿಯುತ್ತಿದ್ದಾರೆ ಎಂದು ಅವರು ಹೇಳಿದರು.
ಸಿಲ್ಕ್ಯಾರಾ ಸುರಂಗದ ಸ್ಥಳಕ್ಕೆ ಪ್ರಧಾನ ಮಂತ್ರಿ ಕಚೇರಿಯ ಮಾಜಿ ಸಲಹೆಗಾರ ಭಾಸ್ಕರ್ ಖುಲ್ಬೆ ಅವರು ಭೇಟಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆಗಾಗಿ ಅಳವಡಿಸಲಾಗುತ್ತಿರುವ ಪೈಪ್‌ನ ಮುಕ್ತ ಚಲನೆಗೆ ಅಡ್ಡಿಯಾಗಿದ್ದ ಉಕ್ಕಿನ ರಚನೆಯನ್ನು ತೆಗೆದುಹಾಕಲಾಗಿದೆ ಎಂದು ಹೇಳಿದರು. ನಿನ್ನೆ ರಾತ್ರಿ ರಂಧ್ರ ಕೊರೆಯುವ ಸಮಯದಲ್ಲಿ ಉಕ್ಕಿನ ರಚನೆ ಅಡ್ಡ ಬಂದಿದ್ದು, ಇದರಿಂದಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಮುಂದೆ ಯಾವುದೇ ಅಡೆತಡೆಗಳು ಉಂಟಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ ಎಂದೂ ಅವರು ಹೇಳಿದ್ದಾರೆ.