ಇಂಫಾಲ್: ಮಣಿಪುರದಲ್ಲಿ ಶಾಂತಿ ಮತ್ತು ಸಹಜ ಸ್ಥಿತಿಯನ್ನು ಮರು ಸ್ಥಾಪಿಸುವ ನಿಟ್ಟಿನಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ಮುಖಂಡರ ಜೊತೆ ಮಾತುಕತೆ ನಡೆಸಬೇಕು ಎಂದು ಮಣಿಪುರದ 10 ರಾಜಕೀಯ ಪಕ್ಷಗಳ ನಿಯೋಗವು ರಾಜ್ಯಪಾಲೆ ಅನುಸೂಯಾ ಉಯಿಕೆ ಅವರನ್ನು ಒತ್ತಾಯಿಸಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಒ ಐಬೊಬಿ ಸಿಂಗ್ ನೇತೃತ್ವದ ಈ ನಿಯೋಗವು ಈ ಸಂಬಂಧ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದು, ಕೇಂದ್ರ ಸರ್ಕಾರ, ಅದರಲ್ಲೂ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸದೆ ಇದ್ದರೆ ರಾಜ್ಯದಲ್ಲಿ ಶಾಂತಿ ಮರುಕಳಿಸದು ಎಂದು ತಿಳಿಸಿದೆ.
ರಾಜ್ಯದಲ್ಲಿರುವ ಎರಡೂ ಸಮುದಾಯಗಳ ಜೊತೆ ಶೀಘ್ರದಲ್ಲೇ ಶಾಂತಿ ಮಾತುಕತೆ ನಡೆಸಬೇಕು. ಈ ಮೂಲಕ ರಾಜ್ಯದಲ್ಲಿನ ಬಿಕ್ಕಟ್ಟನ್ನು ಬಗೆಹರಿಸಬಹುದು ಎಂದು ನಿಯೋಗವು ತಿಳಿಸಿದೆ ಎಂದು ರಾಜಭವನ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಎರಡೂ ಸಮುದಾಯಗಳ ಸಭೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯಪಾಲರು ತಿಳಿಸಬೇಕು ಎಂದು ಒತ್ತಾಯಿಸಿದ ನಿಯೋಗವು, ಮಣಿಪುರದಲ್ಲೇ ಪ್ರಧಾನಿ ಅವರೊಂದಿಗೆ ಸರ್ವಪಕ್ಷಗಳ ಸಭೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದೆ. ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಸಂಘರ್ಷದಿಂದಾಗಿ ಮಣಿಪುರದಲ್ಲಿ ಕೆಲವು ತಿಂಗಳಿನಿಂದ ಉದ್ವಿಗ್ನ ಸ್ಥಿತಿ ಉಂಟಾಗಿದೆ.