ಬದಿಯಡ್ಕ: ರೋಟರಿ ಕ್ಲಬ್ ಕಾಸರಗೋಡು ಹಾಗೂ ರೋಟರಿ ಕ್ಲಬ್ ಬದಿಯಡ್ಕ ಇದರ ಜಂಟಿ ಆಶ್ರಯದಲ್ಲಿ ಶನಿವಾರ ಬದಿಯಡ್ಕ ಮನುಕುಲ ರೆಸಿಡೆನ್ಸಿಯಲ್ಲಿ ಉಚಿತ ಮೆಗಾ ವೈದ್ಯಕೀಯ ಶಿಬಿರ ಜರಗಿತು. ಖ್ಯಾತ ಶ್ವಾಸಕೋಶ ತಜ್ಞ ರೋಟರಿಯನ್ ಡಾ.ನಾರಾಯಣ ಪ್ರದೀಪ ದೀಪಬೆಳಗಿಸಿ ಉದ್ಘಾಟಿಸಿ ಶಿಬಿರಕ್ಕೆ ಚಾಲನೆಯನ್ನು ನೀಡಿದರು. ಕಾಸರಗೊಡು ಜಿಲ್ಲಾ 3204 ರೋಟರಿ ಉಪ ರಾಜ್ಯಪಾಲ ಸಿ.ಎ. ವಿಶಾಲ್‍ಕುಮಾರ್ ಅಧ್ಯಕ್ಷತೆಯನ್ನು ವಹಿಸಿ ಶಿಬಿರದ ಮಹತ್ವ ಮತ್ತು ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯು ಪೋಲಿಯೋ ನಿರ್ಮೂಲನೆ ಹಾಗೂ ವಿಶ್ವ ಆರೋಗ್ಯಕ್ಕಾಗಿ ನಡೆಸಿದ ಸೇವಾಕಾರ್ಯಗಳ ಕುರಿತು ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು.
ದೇರಳಕಟ್ಟೆಯ ಯೇನೆಪೆÇೀಯ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಖ್ಯಾತ ಕ್ಯಾನ್ಸರ್ ತಜ್ಞ ಡಾ. ರಾಜೇಶ್ ಕೃಷ್ಣನ್ ಮಾತನಾಡಿ ಕ್ಯಾನ್ಸರ್ ರೋಗವನ್ನು ತಪಾಸಣೆ, ರೋಗ ನಿರ್ಣಯ, ಚಿಕಿತ್ಸೆ ಮೂಲಕ ಗುಣಪಡಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು ಶುಭಾಶಂಸನೆಗೈದರು. ಶಿಬಿರ ಪ್ರಬಂಧಕ ಶಮೀರ್ ವೇದಿಕೆಯಲ್ಲಿದ್ದರು. ಬದಿಯಡ್ಕ ರೋಟರಿ ಅಧ್ಯಕ್ಷ ಬಿ. ರಾಧಾಕೃಷ್ಣ ಪೈ ಸ್ವಾಗತಿಸಿದರು. ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕ ದೇವಿದಾಕ್ಷನ್ ಕಾರ್ಯಕ್ರಮ ನಿರೂಪಿಸಿದರು. ಕಾಸರಗೋಡು ರೋಟರಿ ಅಧ್ಯಕ್ಷ ಗೌತಮ್ ಭಕ್ತ ಮಾತನಾಡಿ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಯಶಸ್ವಿಗೆ ಕಾರಣಿಕರ್ತರಾದ ಬದಿಯಡ್ಕದ ಆಸುಪಾಸಿನ ನಾಗರಿಕರಿಗೂ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲಾ ರೋಟರಿ ಸದಸ್ಯರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ರೋಟರಿ ಬದಿಯಡ್ಕದ ಕಾರ್ಯದರ್ಶಿ ವೈ. ರಾಘವೇಂದ್ರ ಪ್ರಸಾದ್ ವಂದಿಸಿದರು.