ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳಿಗೆ ಮರಣ ದಂಡನೆ ವಿಧಿಸಿರುವುದರ ವಿರುದ್ಧ ಭಾರತ ಸಲ್ಲಿಸಿರುವ ಮೇಲ್ಮನವಿಯನ್ನು ಕತಾರ್ ಕೋರ್ಟ್ ವಿಚಾರಣೆಗೆ ಸ್ವೀಕರಿಸಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದ್ದು, ಗೂಢಚಾರಿಕೆ ನಡೆಸಿದ ಆರೋಪದ ಮೇರೆಗೆ ಕತಾರ್ ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ 8 ಮಂದಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ಮರಣ ದಂಡನೆ ವಿಧಿಸಿರುವುದರ ವಿರುದ್ಧ ಭಾರತ ಸಲ್ಲಿಸಿರುವ ಮೇಲ್ಮನವಿಯನ್ನು ಕತಾರ್ ಕೋರ್ಟ್ ವಿಚಾರಣೆಗೆ ಸ್ವೀಕರಿಸಿದೆ. ಭಾರತ ಸರ್ಕಾರ ಗುರುವಾರ ಅರ್ಜಿ ಸಲ್ಲಿಸಿದ್ದು, ಕತಾರ್ ನ್ಯಾಯಾಲಯವು ಶೀಘ್ರವೇ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ ಎಂದೂ ವರದಿಗಳು ಹೇಳಿವೆ. ಆದರೆ, ಈ ವಿಚಾರವಾಗಿ ವಿದೇಶಾಂಗ ಸಚಿವಾಲಯದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಏನಿದು ಪ್ರಕರಣ?
ಕತಾರ್‌ನ ಖಾಸಗಿ ಕಂಪನಿ ಅಲ್ ದಹ್ರಾ ಜೊತೆ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆಗಳನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಬೇಹುಗಾರಿಕೆ ಆರೋಪದಡಿಯಲ್ಲಿ ಬಂಧಿಸಲಾಗಿತ್ತು. ಭಾರತೀಯ ನೌಕಾಪಡೆಯ 8 ಜನ ಮಾಜಿ ಅಧಿಕಾರಿಗಳಿಗೆ ಗೂಢಚಾರಿಕೆ ನಡೆಸಿದ ಪ್ರಕರಣವೊಂದರಲ್ಲಿ ಕತಾರ್‌ನ ನ್ಯಾಯಾಲಯ ಅಕ್ಟೋಬರ್ 26ರಂದು ಮರಣ ದಂಡನೆ ವಿಧಿಸಿತ್ತು. ಈ ತೀರ್ಪಿಗೆ ಆಘಾತ ವ್ಯಕ್ತಪಡಿಸಿದ್ದ ಭಾರತ, 8 ಜನ ಭಾರತೀಯರನ್ನು ಶಿಕ್ಷೆಯಿಂದ ಪಾರು ಮಾಡಲು ಕಾನೂನಿನಡಿ ಲಭ್ಯವಿರುವ ಎಲ್ಲ ಆಯ್ಕೆಗಳನ್ನು ಪರಿಗಣಿಸಲಾಗುವುದು ಎಂದು ಹೇಳಿತ್ತು.
ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ‘ಕತಾರ್‌ನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಎಂಟು ಜನ ಮಾಜಿ ಅಧಿಕಾರಿಗಳಿಗೆ ಕಾನೂನು ಹಾಗೂ ಕಾನ್ಸುಲರ್ ಕಚೇರಿಯ ನೆರವು ನೀಡಲಾಗುವುದು’ ಎಂದು ಹೇಳಿದ್ದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಈ ವಿಷಯದ ಬಗ್ಗೆ ಭಾರತವು ಕತಾರ್ ಅಧಿಕಾರಿಗಳೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದೆ ಮತ್ತು ಸರ್ಕಾರವು ಭಾರತೀಯ ಪ್ರಜೆಗಳಿಗೆ ಎಲ್ಲಾ ಕಾನೂನು ಮತ್ತು ರಾಯಭಾರ ಕಚೇರಿ ಸಂಪರ್ಕ ಸಹಾಯವನ್ನು ನೀಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದ್ದಾರೆ.