ಉತ್ತರಕಾಶಿ: ಸಿಲ್ಕ್ಯಾರಾ ಸುರಂಗದಲ್ಲಿ 15 ದಿನಗಳಿಂದ ಸಿಲುಕಿರುವ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಭಾನುವಾರ ಲಂಬವಾಗಿ ಸುರಂಗ ಕೊರೆಯುವ ಕಾರ್ಯ ಆರಂಭಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಭಾರತೀಯ ಸೇನೆಯ ಮದ್ರಾಸ್ ಸ್ಯಾಪರ್ಸ್ ಘಟಕ ಸ್ಥಳಕ್ಕೆ ಬಂದಿದೆ.
ಕಾರ್ಮಿಕರನ್ನು ರಕ್ಷಿಸಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಭಾನುವಾರ ಮಧ್ಯಾಹ್ನದಿಂದ ಲಂಬವಾಗಿ ಸುರಂಗ ಕೊರೆಯುವ ಕೆಲಸ ಆರಂಭವಾಗಿದ್ದು, ಈವರೆಗೆ 19.2 ಮೀಟರ್‌ನಷ್ಟು ಕೊರೆಯಲಾಗಿದೆ. ಯಾವುದೇ ಅಡೆತಡೆ ಎದುರಾಗದಿದ್ದರೆ, ಕಾರ್ಮಿಕರನ್ನು ತಲುಪಲು ನಾಲ್ಕು ದಿನ ಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
'ಮೇಲ್ಭಾಗದಿಂದ ಒಟ್ಟು 86 ಮೀಟರ್‌ನಷ್ಟು ಸುರಂಗ ಕೊರೆಯಬೇಕಿದೆ. ಬಳಿಕ ಕಾರ್ಮಿಕರನ್ನು ಹೊರತರಲು ಸುರಂಗದ ಹೊರಪದರ ಒಡೆಯಬೇಕಾಗುತ್ತದೆ. ಸಟ್ಲಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ (ಎಸ್‌ಜೆವಿಎನ್‌ಎಲ್) 1.2 ಮೀಟರ್ ವ್ಯಾಸದ ಲಂಬ ಡ್ರಿಲ್ಲಿಂಗ್ ಕೆಲಸ ಮಾಡುತ್ತಿದೆ. ಯಂತ್ರವು 45 ಮೀಟರ್‌ವರೆಗೆ ಮಾತ್ರ ಡ್ರಿಲ್ ಮಾಡಬಹುದು. ನಂತರ ಯಂತ್ರವನ್ನು ಬದಲಾಯಿಸಬೇಕಾಗುತ್ತದೆ' ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತ್ತಾ ಹಸ್ನೈನ್ ಹೇಳಿದರು.
ಕಾರ್ಮಿಕರನ್ನು ರಕ್ಷಿಸಲು ಆರು ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಆದರೆ, ಉತ್ತಮ ಆಯ್ಕೆ ಅಡ್ಡವಾಗಿ ಸುರಂಗ ಕೊರೆಯುವುದು. ಅಡ್ಡವಾಗಿ 47 ಮೀಟರ್ ಡ್ರಿಲ್ಲಿಂಗ್ ಪೂರ್ಣಗೊಂಡಿದೆ ಎಂಬುದನ್ನು ಅವರು ಉಲ್ಲೇಖಿಸಿದರು.
ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿಲ್ಲ. ದುರಸ್ತಿ ಕೆಲಸ ನಡೆಯುತ್ತಿದೆ. ಡ್ರಿಲ್ ಯಂತ್ರದ ಒಂದು ಭಾಗವನ್ನು ಬೆಟ್ಟದ ಮೇಲೆ ಲಂಬವಾಗಿ ಕೊರೆಯಲು ಕಳುಹಿಸಲಾಗಿದೆ ಎಂದರು.
ಯಂತ್ರದ ಬ್ಲೇಡ್‌ಗಳು ಪೈಪ್‌ಗೆ ಬಡಿದ ಕಾರಣ ಶುಕ್ರವಾರ ರಕ್ಷಣಾ ಕಾರ್ಯವನ್ನು ನಿಲ್ಲಿಸಲಾಗಿತ್ತು. ಈ ಬ್ಲೇಡ್‌ಗಳು ಅವಶೇಷಗಳ ಅಡಿ ಸಿಲುಕಿಕೊಂಡಿವೆ. ಹಾನಿಯಾಗಿರುವ ಭಾಗಗಳನ್ನು 34 ಮೀಟರ್ ವರೆಗೆ ಹೊರತೆಗೆಯಲಾಗಿದೆ. ಇನ್ನೂ ಸುಮಾರು 13 ಮೀಟರ್‌ನಷ್ಟು ಹೊರಗೆ ತರಬೇಕಿದೆ. ರಾತ್ರಿ ವೇಳೆಗೆ ಅವುಗಳನ್ನು ಹೊರತರುವ ನಿರೀಕ್ಷೆ ಇದೆ. ಆ ಭಾಗಗಳನ್ನು ಕತ್ತರಿಸಿ ತೆಗೆದುಹಾಕಲು ಭಾನುವಾರ ಹೈದರಾಬಾದ್‌ನಿಂದ ಪ್ಲಾಸ್ಮಾ ಕಟ್ಟರ್ ತರಲಾಗಿದೆ.
'ಯಂತ್ರ ಸಂಪೂರ್ಣವಾಗಿ ಹೊರಬಂದ ಬಳಿಕ, 15 ಮೀಟರ್ ಉದ್ದದಷ್ಟು ಸುರಂಗವನ್ನು ಕಾರ್ಮಿಕರು ಅಗೆಯಬೇಕಿದೆ. ಈ ಮೊದಲು, ನಾವು ಗಂಟೆಗೆ 4-5 ಮೀಟರ್ ವೇಗದಲ್ಲಿ ಕೊರೆಯುತ್ತಿದ್ದೆವು. ಆದರೆ, ಈಗ ಅದು ಆಗುವುದಿಲ್ಲ' ಎಂದು ಹಸ್ನೈನ್ ಹೇಳಿದರು.
ಆರು ಇಂಚು ಪೈಪ್ ಮೂಲಕ ಆಹಾರ, ಔಷಧ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಕಾರ್ಮಿಕರಿಗೆ ರವಾನಿಸಲಾಗುತ್ತಿದೆ. ಕಾರ್ಮಿಕರು ತಮ್ಮ ಕುಟುಂಬದ ಸದಸ್ಯರೊಂದಿಗೆ ನಿತ್ಯ ಮಾತನಾಡಲು ಸೌಲಭ್ಯ ಕಲ್ಪಿಸಲಾಗಿದೆ.
'ಹೊರಬಂದ ಬಳಿಕ ಮತ್ತೆ ಕಳುಹಿಸುವುದಿಲ್ಲ'
'ಸುರಂಗದಿಂದ ಸುರಕ್ಷಿತವಾಗಿ ಹೊರಬಂದ ಬಳಿಕ ಮತ್ತೆ ಆ ಕೆಲಸ ಮಾಡಲು ಮಗನನ್ನು ಕಳುಹಿಸುವುದಿಲ್ಲ' ಎಂದು ಪುತ್ರನಿಗಾಗಿ ಕಾಯುತ್ತಿರುವ ತಂದೆ ಚೌಧರಿ ಭಾನುವಾರ ಹೇಳಿದರು. ಈ ಹಿಂದೆ ಮುಂಬೈನಲ್ಲಿ ನಡೆದ ಅಪಘಾತದಲ್ಲಿ ಒಬ್ಬ ಮಗನನ್ನು ಕಳೆದುಕೊಂಡಿರುವ ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ಕೃಷಿ ಕಾರ್ಮಿಕ ಚೌಧರಿ ಈಗ ತಮ್ಮ ಎರಡನೇ ಮಗನ ಸುರಕ್ಷಿತ ಬಿಡುಗಡೆಗಾಗಿ ಪ್ರಾರ್ಥಿಸುತ್ತಿದ್ದಾರೆ. 'ಒಬ್ಬನೇ ಮಗ ಮಂಜೀತ್‌ಗೆ ಏನಾದರೂ ಸಂಭವಿಸಿದರೆ ನಾನು ಮತ್ತು ಪತ್ನಿ ಹೇಗೆ ಬದುಕುವುದು' ಎಂದು ಪ್ರಶ್ನಿಸಿದರು. ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರ ಪೈಕಿ 22 ವರ್ಷ ವಯಸ್ಸಿನ ಮಂಜೀತ್ ಕೂಡ ಒಬ್ಬರು. 'ನನ್ನ ಮಗ ಆರೋಗ್ಯವಾಗಿದ್ದಾನೆ. ರಕ್ಷಣಾ ಕಾರ್ಯಾಚರಣೆ ವಿಳಂಬದಿಂದಾಗಿ ನಾನು ಸ್ವಲ್ಪ ಒತ್ತಡದಲ್ಲಿದ್ದೇನೆ. ಇದು ಯುದ್ಧ. ಹೆದರಬಾರದು ಎಂದು ಅವನಿಗೆ ಹೇಳಿದ್ದೇನೆ. ನಮ್ಮದು ಬಡ ಕುಟುಂಬ. ಪತ್ನಿಯ ಆಭರಣಗಳ ಮೇಲೆ ₹9 ಸಾವಿರ ಸಾಲ ಪಡೆದು ಇಲ್ಲಿಗೆ ಬಂದಿದ್ದೇವೆ. ಇಲ್ಲಿನ ಆಡಳಿತವು ಜಾಕೆಟ್ ಮತ್ತು ಬೂಟುಗಳನ್ನು ನೀಡಿದೆ. ನನ್ನ ಸಾಲವನ್ನೂ ಮರುಪಾವತಿಸಿದೆ' ಎಂದು ಹೇಳಿದರು.